ಬೆಂಗಳೂರು, ಜು.31 www.bengaluruwire.com : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಗರದಲ್ಲಿ ಅಳವಡಿಸಿರುವ ಭೂಗತ ವಿದ್ಯುತ್ ಕೇಬಲ್ (ಅಂಡರ್‌ಗ್ರೌಂಡ್ ಕೇಬಲ್ – ಯುಜಿ) ಯೋಜನೆ ಬಹುತೇಕ ಯಶಸ್ವಿಯಾಗಿ ಜಾರಿಯಾಗಿದೆ. ಇದರಿಂದಾಗಿ ವಿದ್ಯುತ್ ವಿತರಣೆಯಲ್ಲಿನ ನಷ್ಟದ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಶೇಕಡ 30ರಷ್ಟು ಗಣನೀಯವಾಗಿ ಕಡಿಮೆಯಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
2019-20ರಲ್ಲಿ ಶೇಕಡ 12.27ರಷ್ಟಿದ್ದ ವಿತರಣಾ ನಷ್ಟ, 2024-25ರಲ್ಲಿ ಶೇಕಡ 8.04ಕ್ಕೆ ಇಳಿದಿದೆ. ಇದು ಬೆಸ್ಕಾಂನ ದಕ್ಷತೆಯನ್ನು ಸುಧಾರಿಸುವ ಜೊತೆಗೆ, ವಿದ್ಯುತ್ ಖರೀದಿ ವೆಚ್ಚವನ್ನು ಕಡಿಮೆ ಮಾಡಲು ಸಹ ನೆರವಾಗಿದೆ ಎಂದು ಬೆಸ್ಕಾಂ ಇಂಧನ ಆಡಿಟ್ ವಿಭಾಗದಿಂದ ಲಭ್ಯವಾದ ಮಾಹಿತಿಯಿಂದ ಗೊತ್ತಾಗಿದೆ.
ಯೋಜನೆಯ ವಿವರ:
ಬೆಂಗಳೂರಿನಲ್ಲಿ 2019-20ರಲ್ಲೇ ಓವರ್‌ಹೆಡ್ ಕೇಬಲ್‌ಗಳನ್ನು ಯುಜಿ ಕೇಬಲ್‌ಗಳಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆ ಅಡಿಯಲ್ಲಿ ಈವರೆಗೆ ಒಟ್ಟು 7,367.45 ಕಿ.ಮೀ. ಉದ್ದದ 11 ಕೆ.ವಿ. ಸಾಮರ್ಥ್ಯದ ಎಚ್ ಟಿ (High Tension – ಕಡಿಮೆ ಒತ್ತಡದ) ತಂತಿಗಳನ್ನು ಹಾಗೂ 6,707.63 ಕಿ.ಮೀ. ಉದ್ದದ ಎಲ್‌ಟಿ (Low Tneson – ಕಡಿಮೆ ಒತ್ತಡದ) ತಂತಿಗಳನ್ನು ಭೂಗತ ಕೇಬಲ್/ಏರಿಯಲ್ ಬಂಚ್ ಕೇಬಲ್ ಗಳಾಗಿ ಪರಿವರ್ತಿಸಿ ಅಳವಡಿಸಲಾಗಿದೆ. ಈ ಯೋಜನೆಗೆ ಒಟ್ಟು 15,031.65 ಕೋಟಿ ರೂ. ವೆಚ್ಚವಾಗಿದೆ. ಪ್ರಸ್ತುತ ಯೋಜನೆಯು ಶೇಕಡ 90ರಷ್ಟು ಪೂರ್ಣಗೊಂಡಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ನಷ್ಟಕ್ಕೆ ಕಾರಣವಾದ ಅಂಶಗಳ ನಿವಾರಣೆ:
“ಭೂಗತ ಕೇಬಲ್ ಅಳವಡಿಕೆಯಿಂದ ವಿದ್ಯುತ್ ಸೋರಿಕೆ ಕಡಿಮೆಯಾಗಿದೆ. ಇದು ವಿದ್ಯುತ್ ನಷ್ಟ ಇಳಿಕೆಗೆ ಪ್ರಮುಖ ಕಾರಣವಾಗಿದೆ” ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ, ವಿದ್ಯುತ್ ಕಳ್ಳತನವನ್ನು ತಡೆಗಟ್ಟಲು ಜಾಗೃತ ದಳವು ಕಠಿಣ ಕ್ರಮಗಳನ್ನು ಕೈಗೊಂಡಿರುವುದು ಮತ್ತು ಡಿಜಿಟಲ್ ಮೀಟರ್‌ಗಳ ಅಳವಡಿಕೆಯು ನಷ್ಟ ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಚಿಂತನೆ:
ನಗರದಲ್ಲಿ ಈ ಯೋಜನೆ ಯಶಸ್ಸು ಕಂಡಿದ್ದು, ಇದೇ ಮಾದರಿಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದರೆ ವಿದ್ಯುತ್ ಸೋರಿಕೆ ಮತ್ತು ನಷ್ಟದ ಪ್ರಮಾಣವನ್ನು ಇನ್ನಷ್ಟು ತಡೆಯಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದು ಬೆಸ್ಕಾಂಗೆ ದೊಡ್ಡ ಸವಾಲಾಗಿ ಉಳಿದಿದ್ದ ವಿದ್ಯುತ್ ನಷ್ಟ ಸಮಸ್ಯೆಗೆ ಪರಿಹಾರ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ವರ್ಷವಾರು ವಿತರಣಾ ನಷ್ಟದ ಅಂಕಿಅಂಶ:
* 2019-20: 12.27%
* 2020-21: 11.06%
* 2021-22: 11.23%
* 2022-23: 9.21%
* 2023-24: 9.13%
* 2024-25: 8.04%






















