ಚನ್ನಪಟ್ಟಣ, ಜು.30 www.bengaluruwire.com : ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲಿನ ಮಳಿಗೆಗಳನ್ನು ತೆರೆಯುವ ಕುರಿತು ಸ್ಥಳ ಪರಿಶೀಲನೆ ನಡೆಯುತ್ತಿದ್ದು, ಶೀಘ್ರದಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್ ಅವರು, ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳನ್ನು ತೆರೆಯಲು ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಹೊರ ರಾಜ್ಯದ ಸಂಸ್ಥೆಗಳು ಹೆಚ್ಚಿನ ಬಾಡಿಗೆ ನೀಡಲು ಮುಂದಾಗಿರುವುದರಿಂದ, ಮೆಟ್ರೋ ಅಧಿಕಾರಿಗಳು ನಂದಿನಿ ಸಂಸ್ಥೆಯಿಂದಲೂ ಹೆಚ್ಚಿನ ಬಾಡಿಗೆ ನಿರೀಕ್ಷಿಸುತ್ತಿದ್ದಾರೆ.
ಆದರೆ, ನಂದಿನಿ ರೈತರ ಸಂಸ್ಥೆಯಾಗಿರುವುದರಿಂದ ಕಡಿಮೆ ಬಾಡಿಗೆ ನೀಡುವಂತೆ ಉಪಮುಖ್ಯಮಂತ್ರಿಗಳು ಮತ್ತು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಸ್ಥಳ ಪರಿಶೀಲನೆ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುರೇಶ್ ಹೇಳಿದರು.
“ಹಾಲು ಒಕ್ಕೂಟಗಳ ನಿರ್ದೇಶಕರು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅಧ್ಯಕ್ಷರು ಏನು ತೀರ್ಮಾನ ಮಾಡುತ್ತಾರೋ ಅದರಂತೆ ಕೆಎಂಎಫ್ ಅಧ್ಯಕ್ಷ ಸ್ಥಾನ ನಿರ್ಧಾರವಾಗಲಿದೆ” ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.

ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್‌ಗೆ ಚಾಲನೆ :
ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್‌ಗಳನ್ನು ಪರಿಚಯಿಸುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ಪ್ರಾಯೋಗಿಕವಾಗಿ ಬೆಂಗಳೂರಿನ ಒಂದು ಭಾಗವನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ. ಈ ಹೊಸ ಪ್ಯಾಕೆಟ್‌ಗಳ ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ, ರಾಜ್ಯಮಟ್ಟದಲ್ಲಿ ಈ ಕುರಿತು ಚರ್ಚೆ ನಡೆಸಬೇಕಿದೆ.
ಜಯನಗರ, ಬಿಟಿಎಂ ಲೇಔಟ್ ಸೇರಿದಂತೆ ಸೂಕ್ತ ಸ್ಥಳಗಳನ್ನು ಮಾರುಕಟ್ಟೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅತಿ ಶೀಘ್ರದಲ್ಲೇ ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರಾಯೋಗಿಕವಾಗಿ ಇವುಗಳನ್ನು ಬಿಡುಗಡೆ ಮಾಡಲಾಗುವುದು. ಸ್ವಲ್ಪ ನಷ್ಟವಾದರೂ ಪರಿಸರ ಸಂರಕ್ಷಣೆಗಾಗಿ ಇದು ದೊಡ್ಡ ಹೆಜ್ಜೆ ಎಂದು ಅವರು ಒತ್ತಿ ಹೇಳಿದರು. ಇದನ್ನೂ ಓದಿ : BW IMPACT | ಬೆಂಗಳೂರು ವೈರ್ ವರದಿ ಪರಿಣಾಮ : ಉಲ್ಲಾಳ 100 ಅಡಿ ರಸ್ತೆಯ ಗುಂಡಿ ತಾತ್ಕಾಲಿಕ ದುರಸ್ತಿ; 2 ವಾರದಲ್ಲಿ ಕಣ್ಣೂರು ಡಾಂಬರು ಮಿಶ್ರಣ ಘಟಕ ಪುನರಾರಂಭ
ರಾಜ್ಯದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ : ಉತ್ಪಾದನೆಯಾಗಲು ಹಾಲಿನ ಪ್ಯಾಕೆಟ್‌ಗಳೇ ಪ್ರಮುಖ ಕಾರಣವಾಗಿದ್ದು, ನಿತ್ಯ ಕೋಟ್ಯಂತರ ಪ್ಲಾಸ್ಟಿಕ್ ಕವರ್‌ಗಳು ತ್ಯಾಜ್ಯವಾಗಿ ಬೀಳುತ್ತಿವೆ. ಇವುಗಳನ್ನು ಕೊಳೆಯುವಂತೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಚಿಂತನೆಯಾಗಿದೆ. ಈ ಪ್ರಾಯೋಗಿಕ ಪ್ರಯತ್ನದ ನಂತರ ಸರ್ಕಾರದ ಮುಂದೆ ಈ ಪ್ರಸ್ತಾವನೆಯನ್ನು ಇಟ್ಟು, ಸಾರ್ವಜನಿಕರ ವಿಶ್ವಾಸ ಗಳಿಸಿ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಸುರೇಶ್ ಮಾಹಿತಿ ನೀಡಿದರು.
ರೈತರ ಹಿತಾಸಕ್ತಿಗೆ ಆದ್ಯತೆ :
ಬೆಂಗಳೂರು ಹಾಲು ಒಕ್ಕೂಟದಲ್ಲಿ ಚನ್ನಪಟ್ಟಣ ಅತಿ ಹೆಚ್ಚು ಹಾಲು ಉತ್ಪಾದಿಸುತ್ತಿದೆ. ಇಲ್ಲಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಮುಲ್ ಅಧ್ಯಕ್ಷನಾಗಿ ಆಯ್ಕೆಯಾದ ನಂತರ, ಎಲ್ಲಾ 14 ನಿರ್ದೇಶಕರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಒಕ್ಕೂಟದ ಬೆಳವಣಿಗೆಗೆ ಹಾಗೂ ರೈತರ ಹಿತ ಕಾಯಲು ಕಾರ್ಯಕ್ರಮ ರೂಪಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಆಡಳಿತ ವರ್ಗ, ಹಾಲು ಮಂಡಳಿಯ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಇಂದು ಇಲ್ಲಿಗೆ ಭೇಟಿ ನೀಡಲಾಗಿದೆ. ರೈತರಿಗೆ ಅನುಕೂಲ ಕಲ್ಪಿಸಿ, ಹೆಚ್ಚು ಹಾಲು ಉತ್ಪಾದನೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸುರೇಶ್ ತಿಳಿಸಿದರು.























