ಬೆಂಗಳೂರು, ಜು.29 www.bengaluruwire.com : ಒಂದು ವಾರದ ಒಳಗಾಗಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿ ಐವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳು ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಮಂಗಳವಾರ (ಜುಲೈ 29, 2025) ರಾಜ್ಯದ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ಈ ಶೋಧ ಕಾರ್ಯಾಚರಣೆಯಲ್ಲಿ ಒಟ್ಟು 24.44 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ, ನಗದು, ಚಿನ್ನಾಭರಣ ಹಾಗೂ ವಾಹನಗಳನ್ನು ಪತ್ತೆ ಹಚ್ಚುವ ಮೂಲಕ ಭ್ರಷ್ಟರ ಹೆಡೆಮುರಿ ಕಟ್ಟುವಲ್ಲಿ ಲೋಕಾಯುಕ್ತ ಯಶಸ್ವಿಯಾಗಿದೆ.
ಬೆಂಗಳೂರು ನಗರ, ಚಿತ್ರದುರ್ಗ, ಹಾಸನ ಮತ್ತು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಈ ಐವರು ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳು ದಾಖಲಾಗಿದ್ದವು.
ದಾಳಿಯಲ್ಲಿ ಪತ್ತೆಯಾದ ಆಸ್ತಿ ವಿವರಗಳು:

* ಕೆ. ಓಂಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಬಿಡಿಎ, ಬೆಂಗಳೂರು: ಇವರ 5 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 4.78 ಕೋಟಿ ರೂ. ಮೌಲ್ಯದ 2 ನಿವೇಶನಗಳು ಮತ್ತು 2 ಮನೆಗಳು ಪತ್ತೆಯಾಗಿವೆ. ಜೊತೆಗೆ, 5 ಲಕ್ಷ ರೂ. ನಗದು, 60.96 ಲಕ್ಷ ರೂ. ಮೌಲ್ಯದ ಆಭರಣಗಳು, 34 ಲಕ್ಷ ರೂ. ಮೌಲ್ಯದ ವಾಹನಗಳು ಮತ್ತು 48 ಲಕ್ಷ ರೂ. ಮೌಲ್ಯದ ಇತರ ಎಫ್‌ಡಿ ಸೇರಿದಂತೆ ಒಟ್ಟು 1.47 ಕೋಟಿ ರೂ. ಚರಾಸ್ತಿ ಪತ್ತೆಯಾಗಿದೆ. ಒಟ್ಟಾರೆ, ಓಂಪ್ರಕಾಶ್ ಅವರ ಬಳಿ 6.26 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

* ಎನ್. ವೆಂಕಟೇಶ್, ತೆರಿಗೆ ನಿರ್ಧಾರಕ, ಶೆಟ್ಟಿಹಳ್ಳಿ ಉಪವಿಭಾಗ, ಬಿಬಿಎಂಪಿ, ಬೆಂಗಳೂರು: ಇವರ 4 ಸ್ಥಳಗಳಲ್ಲಿ ನಡೆದ ಶೋಧದಲ್ಲಿ 2.25 ಕೋಟಿ ರೂ. ಮೌಲ್ಯದ 2 ನಿವೇಶನಗಳು, 3 ಮನೆಗಳು, 1 ಫಾರ್ಮ್ ಹೌಸ್ ಮತ್ತು 6 ಎಕರೆ 17 ಗುಂಟೆ ಕೃಷಿ ಭೂಮಿ ಪತ್ತೆಯಾಗಿದೆ. ಅಲ್ಲದೆ, 2.80 ಲಕ್ಷ ರೂ. ನಗದು, 10.85 ಲಕ್ಷ ರೂ. ಮೌಲ್ಯದ ಆಭರಣಗಳು, 3.85 ಲಕ್ಷ ರೂ. ಮೌಲ್ಯದ ವಾಹನಗಳು ಮತ್ತು 15 ಲಕ್ಷ ರೂ. ಮೌಲ್ಯದ ಇತರ ವಸ್ತುಗಳು ಸೇರಿ ಒಟ್ಟು 32.50 ಲಕ್ಷ ರೂ. ಚರಾಸ್ತಿ ಪತ್ತೆಯಾಗಿದೆ. ಇವರ ಒಟ್ಟು ಅಕ್ರಮ ಆಸ್ತಿ ಮೌಲ್ಯ 2.57 ಕೋಟಿ ರೂ. ಆಗಿದೆ.


* ಡಾ. ವೆಂಕಟೇಶ್ ಜಿ, ತಾಲೂಕು ಆರೋಗ್ಯ ಅಧಿಕಾರಿ, ಹಿರಿಯೂರು ತಾಲೂಕು, ಚಿತ್ರದುರ್ಗ ಜಿಲ್ಲೆ: ಇವರ 3 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 2.87 ಕೋಟಿ ರೂ. ಮೌಲ್ಯದ 5 ನಿವೇಶನಗಳು, 2 ಮನೆಗಳು ಮತ್ತು 3 ಎಕರೆ 5 ಗುಂಟೆ ಕೃಷಿ ಭೂಮಿ ಪತ್ತೆಯಾಗಿದೆ. ಇದರೊಂದಿಗೆ 54,200 ರೂ. ನಗದು, 17.25 ಲಕ್ಷ ರೂ. ಮೌಲ್ಯದ ಆಭರಣಗಳು, 21.40 ಲಕ್ಷ ರೂ. ಮೌಲ್ಯದ ವಾಹನಗಳು ಮತ್ತು 28.30 ಲಕ್ಷ ರೂ. ಮೌಲ್ಯದ ಇತರ ಗೃಹೋಪಯೋಗಿ ವಸ್ತುಗಳು ಸೇರಿದಂತೆ 67.49 ಲಕ್ಷ ರೂ. ಚರಾಸ್ತಿ ಪತ್ತೆಯಾಗಿದೆ. ಇವರ ಒಟ್ಟು ಅಕ್ರಮ ಆಸ್ತಿ ಮೌಲ್ಯ 3.54 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

* ಜಯಣ್ಣ ಆರ್, ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಹಾಸನ ವಿಭಾಗ, ಹಾಸನ: ಇವರ 5 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 5.59 ಕೋಟಿ ರೂ. ಮೌಲ್ಯದ 17 ನಿವೇಶನಗಳು, 8 ಮನೆಗಳು ಮತ್ತು 1 ಎಕರೆ 36 ಗುಂಟೆ ಕೃಷಿ ಭೂಮಿ ಪತ್ತೆಯಾಗಿದೆ. ಜೊತೆಗೆ, 1.36 ಲಕ್ಷ ರೂ. ನಗದು, 18.99 ಲಕ್ಷ ರೂ. ಮೌಲ್ಯದ ಆಭರಣಗಳು, 26 ಲಕ್ಷ ರೂ. ಮೌಲ್ಯದ ವಾಹನಗಳು ಮತ್ತು 23 ಲಕ್ಷ ರೂ. ಮೌಲ್ಯದ ಇತರ ಠೇವಣಿಗಳು ಮತ್ತು ಲಾಕರ್‌ಗಳು ಸೇರಿ 69.35 ಲಕ್ಷ ರೂ. ಚರಾಸ್ತಿ ಪತ್ತೆಯಾಗಿದೆ. ಇವರ ಒಟ್ಟು ಅಕ್ರಮ ಆಸ್ತಿ ಮೌಲ್ಯ 6.28 ಕೋಟಿ ರೂ. ಆಗಿದೆ. ಇದನ್ನೂ ಓದಿ : BW SPECIAL | ಉಲ್ಲಾಳ ವಾರ್ಡಿನ 100 ಅಡಿ ರಸ್ತೆಯಲ್ಲಿದೆ ಸ್ಪಾಟ್ ಔಟ್ ಪಾಯಿಂಟ್!! : ಕಣ್ಣೂರು ಡಾಂಬರ್ ಮಿಕ್ಸ್ ಪ್ಲಾಂಟ್ ಕಣ್ಮುಚ್ಚಿ 1 ವಾರ : ನಗರದಲ್ಲಿ ಸಾವಿಗೆ ಕಾದು ಕುಳಿತಿವೆ ಸಾವಿರಾರು ರಸ್ತೆಗುಂಡಿಗಳು

* ಅಂಜನೇಯ ಮೂರ್ತಿ ಎಂ, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ: ಇವರ 8 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 4.83 ಕೋಟಿ ರೂ. ಮೌಲ್ಯದ 5 ನಿವೇಶನಗಳು, 1 ಮನೆ ಮತ್ತು 1 ವಾಣಿಜ್ಯ ಸಂಕೀರ್ಣ ಪತ್ತೆಯಾಗಿದೆ. ಇವರ ಬಳಿ 50 ಲಕ್ಷ ರೂ. ಮೌಲ್ಯದ ಆಭರಣಗಳು, 15.65 ಲಕ್ಷ ರೂ. ಮೌಲ್ಯದ ವಾಹನಗಳು ಮತ್ತು 28 ಲಕ್ಷ ರೂ. ಮೌಲ್ಯದ ಇತರ ವಸ್ತುಗಳು ಸೇರಿ 93.65 ಲಕ್ಷ ರೂ. ಚರಾಸ್ತಿ ಪತ್ತೆಯಾಗಿದೆ. ಅಂಜನೇಯ ಮೂರ್ತಿ ಅವರ ಒಟ್ಟು ಅಕ್ರಮ ಆಸ್ತಿ ಮೌಲ್ಯ 5.77 ಕೋಟಿ ರೂ. ಆಗಿದೆ.


ಒಟ್ಟಿನಲ್ಲಿ ಲೋಕಾಯುಕ್ತ ಪೊಲೀಸರ ಈ ದಿಟ್ಟ ಕ್ರಮವು ಭ್ರಷ್ಟಾಚಾರ ನಿರ್ಮೂಲನೆಯ ಬದ್ಧತೆಯನ್ನು ಎತ್ತಿ ಹಿಡಿದಿದೆ. ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಕಾರ್ಯಾಚರಣೆಗಳು ನಡೆಯುವ ಸಾಧ್ಯತೆ ಇದೆ.






















