ಬೆಂಗಳೂರು, ಜು.28 www.bengaluruwire.com : ಬೆಂಗಳೂರು ನಗರ ಜಿಲ್ಲಾ ಪತ್ರಕರ್ತರಿಗೆ ಗ್ರಾಮೀಣ ಪತ್ರಕರ್ತರ ಮಾದರಿಯಲ್ಲೇ “ಬಸ್ ಪಾಸ್” ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಭರವಸೆ ನೀಡಿದ್ದಾರೆ.
ವಾಹನವಿಲ್ಲದೆ ಪ್ರತಿನಿತ್ಯ ಕಾರ್ಯನಿಮಿತ್ತ ಬಸ್‌ನಲ್ಲಿ ಪ್ರಯಾಣಿಸುವ ಪತ್ರಕರ್ತರಿಗೆ ಇದು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಗಸಂಸ್ಥೆಯಾದ, ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ನಿವೇಶನ :

ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಸೂಕ್ತ ಜಾಗ ಒದಗಿಸುವ ವಿಚಾರದಲ್ಲಿ ಮಾಜಿ ಸಚಿವ ಹಾಗೂ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ನೆರವು ನೀಡಲು ಮುಂದೆ ಬಂದಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ, ಬಿಡಿಎ ಅಥವಾ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ನಿವೇಶನ ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ನಗರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಕನಿಷ್ಠ ಎರಡು ಗುಂಟೆ ಅಥವಾ ಎರಡು ನಿವೇಶನಗಳನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ಅವರು ಇದೇ ಸಂದರ್ಭದಲ್ಲಿ ಶಾಸಕರ ಮಾತಿಗೆ ದನಿಗೂಡಿಸಿದರು.
ನವ ಪತ್ರಿಕೋದ್ಯಮದ ಕುರಿತು ಸುದರ್ಶನ್ ಚೆನ್ನಂಗಿಹಳ್ಳಿ ಕಿವಿಮಾತು :

ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ್ ಚೆನ್ನಂಗಿಹಳ್ಳಿಯವರು ಭಾಗವಹಿಸಿ, ನವ ಪತ್ರಿಕೋದ್ಯಮದಲ್ಲಿರುವ ಅವಕಾಶಗಳು, ಎದುರಾಗುವ ಸವಾಲುಗಳು ಹಾಗೂ ಕಿರಿಯ ಪತ್ರಕರ್ತರು ಗಮನಕೊಡಬೇಕಾದ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಇದೇ ವೇಳೆ, ಹಿರಿಯ ಪತ್ರಕರ್ತರಾದ ಜಿ.ವೀರಣ್ಣ, ಶಿವಣ್ಣ, ಡಾ.ಆಶಾ ಕೃಷ್ಣಸ್ವಾಮಿ, ಎಂ.ಪಿ.ಶರತ್ ಚಂದ್ರ, ಎಂ.ನಾಗರಾಜ್, ಎಚ್.ಜಿ.ಶ್ರೀನಿವಾಸ್ ಹಾಗೂ ಕೆ.ಎನ್.ಜಯಸಿಂಹ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ, ಹೆಚ್ಚಿನ ಅಂಕ ಗಳಿಸಿದ ಪತ್ರಕರ್ತರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಲೋಕೇಶ್, ಖಜಾಂಚಿ ವಾಸುದೇವ್ ಹೊಳ್ಳ, ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರಕಟ್, ಕಾರ್ಯದರ್ಶಿ ರುದ್ರಸ್ವಾಮಿ, ಬಸವರಾಜ್ ಹಾಗೂ ಉಪಾಧ್ಯಕ್ಷರಾದ ಶ್ರೀನಾಥ್, ಜಕ್ರಿಯ, ಜಯಕುಮಾರ್ ಗೌಡ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.























