ಕೊಡಗು ಜು.27 www.bengaluruwire.com : ರಾಜ್ಯದ ಪತ್ರಕರ್ತರಿಗೆ ವಸತಿ ಸವಲತ್ತು ಕಲ್ಪಿಸುವ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಯೋಜನೆ ರೂಪಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಎಂದು ಭರವಸೆ ನೀಡಿದರು.
ಜಿಲ್ಲಾ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡುತ್ತಾ, ಪತ್ರಕರ್ತರು ಇತರ ಕ್ಷೇತ್ರಗಳಂತೆ ಸುದ್ದಿ ಮನೆಯಲ್ಲಿ ಕೆಲಸದ ಅನಿಶ್ಚಿತತೆ, ಸೂಕ್ತ ರೀತಿ ಸಂಬಳವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಹಲವರಿಗೆ ಸ್ವಂತ ಸೂರಿಲ್ಲದೆ ಸುದ್ದಿಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರಣದಿಂದ ಪತ್ರಕರ್ತರಿಗೆ ವಸತಿ ಸವಲತ್ತು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ನಾವು ಸಮಾಜವನ್ನು ನೋಡುವ ದೃಷ್ಟಿಯನ್ನು ಕಳೆದುಕೊಂಡರೆ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುತ್ತೇವೆ ಎಂದು ಅಭಿಪ್ರಾಯ ಪಟ್ಟರು.
ಪತ್ರಕರ್ತರಿಗೆ ಮತ್ತು ಪತ್ರಕರ್ತರ ಕುಟುಂಬಗಳಿಗೆ ಸಮಾಜ ವಿಶೇಷ ಗೌರವ ನೀಡುತ್ತದೆ ಮತ್ತು ಸರ್ಕಾರ ವಿಶೇಷ ಸವಲತ್ತುಗಳನ್ನು ಕಲ್ಪಿಸುತ್ತದೆ. ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಗಳಾಗಿ ಕೆಲಸ ಮಾಡುತ್ತಾರೆ ಮತ್ತು ಸಮಾಜದ ನೋವುಗಳಿಗೆ ಕನ್ನಡಿ ಹಿಡಿಯುತ್ತಾರೆ ಎನ್ನುವ ಕಾರಣದಿಂದ ಈ ವಿಶೇಷ ಗೌರವ ಮತ್ತು ಸವಲತ್ತು ಸಿಗುತ್ತಿದೆ ಎಂದು ವಿವರಿಸಿದರು.

ಈ ಒಳ ದೃಷ್ಟಿ ಪತ್ರಕರ್ತರಿಗೆ ಇರಬೇಕು. ಈ ಸಮಾಜಮುಖಿ ದೃಷ್ಟಿಯನ್ನು ಕಳೆದುಕೊಂಡರೆ ನಾವು ಸಮಾಜದಲ್ಲಿ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುವ ಜೊತೆಗೆ ನಾವೂ ಹಾಗೇ ಬಿಡುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಪತ್ರಿಕಾ ವೃತ್ತಿಯ ಬಗ್ಗೆ ಎರಡು ರೀತಿಯ ಬೇಸರದ ಮಾತುಗಳನ್ನು ಸ್ನೇಹಿತರು ನನ್ನ ಜೊತೆ ಹಂಚಿಕೊಳ್ಳುತ್ತಾರೆ. ಒಂದು, ಈ ವೃತ್ತಿ ಬದುಕು ಸಾಕಾಗಿದೆ ಸರ್. ಬ್ರೇಕಿಂಗ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಅಂತ ನಮ್ಮ ಉಸಿರು ಕಟ್ಟುತಾ ಇದೆ ಎನ್ನುವ ಬೇಸರ ಒಂದು ಕಡೆಗಿದೆ. ಮತ್ತೊಂದು ಕಡೆ ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ಬರುತ್ತಿರುವ ಅಸತ್ಯ ಮತ್ತು ಅರ್ಧ ಸತ್ಯದ ಸುದ್ದಿಗಳಿಂದ ಸಮಾಜದ ಉಸಿರು ಕಟ್ಟುತ್ತಿದೆ ಎನ್ನುವ ಬೇಸರವೂ ಮತ್ತೊಂದು ಕಡೆಗಿದೆ. ಈ ಎರಡೂ ಬೇಸರಕ್ಕೂ ಬೇರೆ ಯಾರೂ ಕಾರಣರಲ್ಲ. ಪತ್ರಿಕೋದ್ಯಮದ ತೇರನ್ನು ಎಳೆಯುತ್ತಿರುವ ನಾವೇ ಕಾರಣಕರ್ತರು ಎನ್ನುವುದನ್ನು ನಾವು ಮರೆಯಬಾರದು ಎಂದರು.
ಏಕೆಂದರೆ ಸಮಾಜದ ಕಷ್ಟಗಳಿಗೆ ಕನ್ನಡಿ ಹಿಡಿಯುತ್ತಿದ್ದ ಪತ್ರಿಕೋದ್ಯಮ, ಈಗ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಮತ್ತು ಕಾರ್ಪೋರೇಟ್ ಉದ್ಯಮಿಗಳಿಗೆ ಪರವಾಗಿ ಕನ್ನಡಿ ಹಿಡಿಯುತ್ತಿದೆ. ಇಂದು ವ್ಯಕ್ತಿಗತ ದ್ವೇಷ ಮತ್ತು ವೈಯುಕ್ತಿಕ ಬದುಕಿನ ಖಾಸಗಿತನವನ್ನು ಕೆದಕಿ ಕೆದಕಿ ಕಸವನ್ನೇ ಬ್ರೇಕಿಂಗ್ ಸುದ್ದಿಗಳನ್ನಾಗಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜಮುಖಿ ದೃಷ್ಟಿಕೋನವನ್ನು ಬೆಳೆಸಿಕೊಂಡಾಗ ನಮ್ಮ ಸಾಮಾಜಿಕ ಪ್ರಜ್ಞೆ ಬೆಳಯುತ್ತದೆ. ಈ ಪ್ರಜ್ಞೆ ಬೆಳೆದಾಗ ನೀವು ಸಮಾಜದ ಆಸ್ತಿ ಆಗುತ್ತೀರಿ. ಆಗ ಈ ಸಮಾಜದ ಋಣ ತೀರಿಸಿದಂತಾಗುತ್ತದೆ ಎಂದರು.
ಅಮ್ಮನ ಮಡಿಲು-ಮನುಷ್ಯ ಸಂಬಂಧ ಅಳಿಯಬಾರದು :
ತಂತ್ರಜ್ಞಾನ ಬೆಳೆದಂತೆ, ಅವಕಾಶಗಳು ದೊರೆತಂತೆ ಮನುಷ್ಯ ಸಂಬಂಧಗಳು ದುರ್ಬಲವಾಗುತ್ತಿವೆ. ತಾಯಿಯ ಮಡಿಲು, ಅಮ್ಮನ ಕೈ ತುತ್ತು, ಹಳ್ಳಿ ಮನೆ, ಹಸು-ಕುರಿ-ಕೋಳಿ ಸಾಕಾಣೆ ಎಲ್ಲವೂ ದೂರವಾಗುತ್ತಿದೆ. ಕೊನೆಗೆ ಪೋಷಕರ ಜೊತೆಯ ಒಡನಾಟವೂ ಮೊಬೈಲ್ ಗೆ ಸೀಮಿತವಾಗಿ ಮಕ್ಕಳು ವಿದೇಶಕ್ಕೆ ಹೋಗಿ ಕುಳಿತಿರುವ ಪರಿಣಾಮ ಇಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇವೆಲ್ಲಾ ಆರೋಗ್ಯಕರ ಸಮಾಜದ ಲಕ್ಷಣವೇ ಯೋಚಿಸಿ ಎಂದು ಕರೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಸತಿ ಸಚಿವರ ಮಾಧ್ಯಮ ಸಂಯೋಜಕರಾದ ಲಕ್ಷ್ಮೀನಾರಾಯಣ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಸಂಘದ ರಾಜ್ಯ ಉಪಾಧ್ಯಕ್ಷರಾದ ರಮೇಶ್ ಕುಟ್ಟಪ್ಪ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.






















