ಬೆಂಗಳೂರು, ಜು.23 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿದೆ. ದಕ್ಷಿಣ ವಲಯ ಸೇರಿದಂತೆ ವಿವಿಧ ವಿಭಾಗಗಳಲ್ಲಿದ್ದ ಐವರು ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಿ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ದಕ್ಷಿಣ ವಲಯಕ್ಕೆ ಹೊಸ ಮುಖ್ಯ ಎಂಜಿನಿಯರ್ ಆಗಿ ಬಸವರಾಜ ಆರ್. ಕಬಾಡೆ ಅವರನ್ನು ನೇಮಿಸಲಾಗಿದೆ.
ಹಲವು ವರ್ಷಗಳಿಂದ ಬಿಬಿಎಂಪಿ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಆಗಿದ್ದ ಎಸ್.ವಿ. ರಾಜೇಶ್ ಅವರನ್ನು ಈ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅವರು ಹೊಂದಿದ್ದರು.
ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಆಗಿದ್ದ ಬಸವರಾಜ ಆರ್. ಕಬಾಡೆ ಅವರನ್ನು ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಆಗಿ ವರ್ಗಾಯಿಸಲಾಗಿದೆ. ಇದರ ಜೊತೆಗೆ, ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅವರು ಮುಂದುವರಿಸಲಿದ್ದಾರೆ.

ಇನ್ನು, ಕೆ.ವಿ. ರವಿ ಅವರನ್ನು ಗುಣ ಭರವಸೆ ಮತ್ತು ಗುಣ ನಿಯಂತ್ರಣ ವಿಭಾಗದ ಮುಖ್ಯ ಎಂಜಿನಿಯರ್ ಆಗಿ ನೇಮಿಸಲಾಗಿದೆ. ಯಮುನಾ ಅವರು ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಆಗಿ ವರ್ಗಾವಣೆಯಾಗಿದ್ದರೆ, ಬಿ.ಜಿ. ರಾಘವೇಂದ್ರ ಪ್ರಸಾದ್ ಅವರನ್ನು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್ ಹುದ್ದೆಗೆ ವರ್ಗಾಯಿಸಲಾಗಿದೆ.
ಯಲಹಂಕ ವಲಯದ ಅಧೀಕ್ಷಕ ಎಂಜಿನಿಯರ್ ಆಗಿದ್ದ ಎಂ. ಕೃಷ್ಣಮೂರ್ತಿ ಅವರಿಗೆ ಇದೇ ವಲಯದ ಮುಖ್ಯ ಎಂಜಿನಿಯರ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿ ಆದೇಶ ಹೊರಡಿಸಲಾಗಿದೆ. ಈ ವರ್ಗಾವಣೆಗಳು ಬಿಬಿಎಂಪಿ ಕಾರ್ಯವೈಖರಿಯಲ್ಲಿ ಹೊಸ ಚುರುಕು ತರಲಿವೆ ಎಂದು ನಿರೀಕ್ಷಿಸಲಾಗಿದೆ.






















