ಮೈಸೂರು, ಜು.20 www.bengaluruwire.com : ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಂದು ಮೈಲಿಗಲ್ಲು ಸೇರ್ಪಡೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮೈಸೂರಿನ ಬನ್ನಿಮಂಟಪದಲ್ಲಿ ₹120 ಕೋಟಿ ವೆಚ್ಚದಲ್ಲಿ ಸ್ವಚ್ಛ ಹಾಗೂ ಆಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಲು ಮುಂದಾಗಿದೆ.
ಭವಿಷ್ಯದ ಸಾರಿಗೆ ಸಾಮರ್ಥ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಾಣವಾಗಲಿರುವ ಈ ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಮೈಸೂರಿನ ಬನ್ನಿಮಂಟಪದಲ್ಲಿ 14 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ಈ ಬೃಹತ್ ಬಸ್ ನಿಲ್ದಾಣವು ಒಟ್ಟು 4 ಲಕ್ಷ ಚದರ ಅಡಿ ನಿರ್ಮಿತ ವಿಸ್ತೀರ್ಣವನ್ನು ಹೊಂದಿರಲಿದೆ. ಇದರಲ್ಲಿ 1.13 ಲಕ್ಷ ಚದರ ಅಡಿ ನೆಲಮಾಳಿಗೆ, 1.97 ಲಕ್ಷ ಚದರ ಅಡಿ ನೆಲ ಅಂತಸ್ತು ಮತ್ತು 0.91 ಲಕ್ಷ ಚದರ ಅಡಿ ಮೊದಲ ಅಂತಸ್ತು ಒಳಗೊಂಡಿದೆ.
ಬಸ್ ನಿಲ್ದಾಣದ ಪ್ರಮುಖ ಸೌಲಭ್ಯಗಳು:

ನೆಲಮಾಳಿಗೆಯ ಮಹಡಿ (ಪಾರ್ಕಿಂಗ್ ಸೌಲಭ್ಯ):
* 300 ಕಾರುಗಳು ಮತ್ತು 4,000 ದ್ವಿಚಕ್ರ ವಾಹನಗಳ ನಿಲುಗಡೆಗೆ ವಿಶಾಲವಾದ ಸ್ಥಳಾವಕಾಶ.
ನೆಲಮಹಡಿ (ಬಸ್ ಟರ್ಮಿನಲ್):
* ಬಸ್ ಬೇಗಳು: 75 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ.
* ಐಡಲ್ ಬಸ್ ಪಾರ್ಕಿಂಗ್: 35 ಬಸ್‌ಗಳಿಗೆ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ.
* ಶೌಚಾಲಯಗಳು: ಪುರುಷರು, ಮಹಿಳೆಯರು ಮತ್ತು ವಿಶೇಷ ಚೇತನರಿಗೆ ಪ್ರತ್ಯೇಕವಾಗಿ 3 ಬ್ಲಾಕ್‌ಗಳಲ್ಲಿ ಆಧುನಿಕ ಶೌಚಾಲಯಗಳು.
* ಲಿಫ್ಟ್‌ಗಳು: ಸುಗಮ ಸಂಚಾರಕ್ಕಾಗಿ 4 ಲಿಫ್ಟ್‌ಗಳ ವ್ಯವಸ್ಥೆ.
* ಇತರೆ ಸೌಲಭ್ಯಗಳು: ಮಕ್ಕಳಿಗೆ ಹಾಲುಣಿಸುವ ಕೊಠಡಿ, ಸಾಕಷ್ಟು ಟಿಕೆಟ್ ಕೌಂಟರ್‌ಗಳು, ರಿಫ್ರೆಶ್‌ಮೆಂಟ್ ಕೇಂದ್ರಗಳು, ಮಹಿಳೆಯರ ವಿಶ್ರಾಂತಿ ಕೊಠಡಿ, ಪ್ರಯಾಣಿಕರಿಗೆ ಸಾಕಷ್ಟು ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಪ್ರಯಾಣಿಕರ ಕಾಯುವ ಕೊಠಡಿ, ವಿವಿಧ ವಾಣಿಜ್ಯ ಕೇಂದ್ರಗಳು, ಲಗೇಜ್ ಕೊಠಡಿ, ಆಟೋ ಮತ್ತು ಟ್ಯಾಕ್ಸಿ ಸ್ಟ್ಯಾಂಡ್‌ಗಳು ಲಭ್ಯವಿರಲಿವೆ.
ಮೊದಲ ಮಹಡಿ:
* ಕೆಎಸ್‌ಆರ್‌ಟಿಸಿ ಕಚೇರಿ ಸ್ಥಳ ಮತ್ತು ಸಿಬ್ಬಂದಿಗಾಗಿ ವಿಶ್ರಾಂತಿ ಕೊಠಡಿಗಳು ಇಲ್ಲಿ ಇರಲಿವೆ.
ಈ ಹೈಟೆಕ್ ಬಸ್ ನಿಲ್ದಾಣವು ಮೈಸೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಆಯಾಮವನ್ನು ನೀಡಲಿದ್ದು, ನಗರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಈ ಯೋಜನೆಯು ಮೈಸೂರಿನ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಅತ್ಯುತ್ತಮ ಸಾರಿಗೆ ಅನುಭವವನ್ನು ನೀಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.






















