ಬೆಂಗಳೂರು, ಜು.20 www.bengaluruwire.com : ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣಗಳು, ಹಲ್ಲೆ, ಅತ್ಯಾಚಾರ ಹಾಗೂ ಅಸ್ವಾಭಾವಿಕ ಸಾವುಗಳ ಕುರಿತು ವ್ಯಾಪಕ ಆತಂಕ ಮತ್ತು ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ.
ಈ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಗಾಗಿ ಇದೀಗ ವಿಶೇಷ ತನಿಖಾ ತಂಡ (Special Investigation Team – SIT) ರಚಿಸಿ ಆದೇಶ ಹೊರಡಿಸಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಾ. ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ಈ ಎಸ್‌ಐಟಿ ಕಾರ್ಯ ನಿರ್ವಹಿಸಲಿದೆ.
ಕಳೆದ ಎರಡು ದಶಕಗಳಿಂದ ವರದಿಯಾಗಿರುವ ಇಂತಹ ಪ್ರಕರಣಗಳ ಕುರಿತು ಎಸ್‌ಐಟಿ ತನಿಖೆ ನಡೆಸಲಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ಸಾರ್ವಜನಿಕರಿಗೆ ಸರ್ಕಾರದ ಈ ಕ್ರಮ ಸಮಾಧಾನ ತಂದಿದೆ.
ಸರ್ಕಾರದ ಆದೇಶದಲ್ಲಿ ಏನಿದೆ? :

ರಾಜ್ಯ ಗೃಹ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ, ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 20 ವರ್ಷಗಳಿಂದ ವರದಿಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರ ನಾಪತ್ತೆ, ಹಲ್ಲೆ, ಅತ್ಯಾಚಾರ ಮತ್ತು ಅಸ್ವಾಭಾವಿಕ ಸಾವು ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ಈ ಪ್ರಕರಣಗಳ ಸತ್ಯಾಸತ್ಯತೆಯನ್ನು ಹೊರತರಲು ಮತ್ತು ತಪ್ಪಿತಸ್ಥರನ್ನು ಕಾನೂನಿನ ಮುಂದೆ ನಿಲ್ಲಿಸಲು ಈ ವಿಶೇಷ ತಂಡಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಎಸ್‌ಐಟಿ ತಂಡದಲ್ಲಿ ಯಾರಿದ್ದಾರೆ? :
ಡಾ. ಪ್ರಣವ್ ಮೊಹಂತಿ ಅವರು ಈ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುತ್ತಾರೆ. ತಂಡದ ಸದಸ್ಯರಾಗಿ ಅನುಭವಿ ಪೊಲೀಸ್ ಅಧಿಕಾರಿಗಳಾದ ನೇಮಕಾತಿ ವಿಭಾಗದ ಉಪ ಪೊಲೀಸ್ ಮಹಾ ನಿರೀಕ್ಷಕ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರಸ್ಥಾನದ ಉಪ ಪೊಲೀಸ್ ಆಯುಕ್ತೆ ಸೌಮ್ಯಲತಾ, ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ್ ಅವರನ್ನು ನೇಮಿಸಲಾಗಿದೆ.
ಈ ಅನುಭವಿ ಅಧಿಕಾರಿಗಳ ತಂಡವು ಪ್ರಕರಣಗಳ ಸೂಕ್ಷ್ಮತೆಯನ್ನು ಅರಿತುಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಬೆಳವಣಿಗೆಯು ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ದಶಕಗಳಿಂದ ಕೇಳಿಬರುತ್ತಿದ್ದ ಅನುಮಾನಗಳಿಗೆ ಮತ್ತು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.






















