ಬೆಂಗಳೂರು, ಜು.19 www.bengaluruwire.com : ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಜಟಾಪಟಿಗೆ ವೇದಿಕೆ ಸಿದ್ಧವಾಗಿದೆ. ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಮುಹೂರ್ತ ನಿಗದಿಯಾಗಿದ್ದು, ಆಗಸ್ಟ್ 11 ರಿಂದ 22 ರವರೆಗೆ ಒಟ್ಟು ಎರಡು ವಾರಗಳ ಕಾಲ ಅಧಿವೇಶನ ನಡೆಯಲಿದೆ ಎಂದು ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದಾರೆ.
ಆದರೆ, ಆಗಸ್ಟ್ 15 ರ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯ ಸಾರ್ವತ್ರಿಕ ರಜೆ, ಆಗಸ್ಟ್ 16 ಎರಡನೇ ಶನಿವಾರದ ರಜೆ ಮತ್ತು ಆಗಸ್ಟ್ 17 ಭಾನುವಾರ ಸರ್ಕಾರಿ ರಜೆ ಆಗಿರುವುದರಿಂದ ಮೂರು ದಿನಗಳು ಕಲಾಪಗಳು ನಡೆಯುವುದಿಲ್ಲ. ಇದರಿಂದಾಗಿ ಒಟ್ಟು 9 ದಿನಗಳು ಮಾತ್ರ ಕಲಾಪ ನಡೆಯಲಿದೆ.
ಇತ್ತೀಚೆಗಷ್ಟೇ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಇದೀಗ ಆಂತರಿಕ ಹಗ್ಗಜಗ್ಗಾಟ ಎದುರಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದರೂ, ಆಡಳಿತಾರೂಢ ಪಕ್ಷದಲ್ಲಿ ಭಿನ್ನಮತದ ಸದ್ದು ಕೇಳಿಬರುತ್ತಿದೆ. ಇದರ ಜೊತೆಗೆ, ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸರ್ಕಾರದ ಮೇಲೆ ಮುಗಿಬೀಳಲು ಅಣಿಯಾಗಿವೆ.
ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣ, ಮಂಗಳೂರು ಕೋಮು ಗಲಭೆ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ತಂತ್ರ ರೂಪಿಸಿವೆ. ಈವರೆಗಿನ ನಾಲ್ಕು ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿ ವಿರೋಧ ಪಕ್ಷಗಳು ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಸರ್ಕಾರದ ಮೇಲೆ ಮುಗಿಬೀಳುವ ಸಂಭವವಿದೆ. ಬಿಜೆಪಿ ಮತ್ತು ಜೆಡಿಎಸ್ ಬಲವಾಗಿ ಒಗ್ಗೂಡಿದ್ದು, ಜಂಟಿ ಹೋರಾಟದ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ.

ವಿಪಕ್ಷಗಳ ಪ್ರತ್ಯಾಸ್ತ್ರಗಳಿಗೆ ತಿರುಗೇಟು ನೀಡಲು ಸರ್ಕಾರವೂ ಸಿದ್ಧವಾಗುತ್ತಿದೆ. ಈ ಅಧಿವೇಶನವು ರಣಾಂಗಣದಂತೆ ಭಾಸವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ಅಧಿವೇಶನವು ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳಿಗೆ ಸಾಕ್ಷಿಯಾಗುವುದರಲ್ಲಿ ಸಂದೇಹವಿಲ್ಲ.






















