ಬೆಂಗಳೂರು, ಜು.18 www.bengaluruwire.com : ಪರಿಸರ ಸ್ನೇಹಿ ಉಪಕ್ರಮಕ್ಕೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಜೈವಿಕವಾಗಿ ವಿಘಟನೆಯಾಗುವ ಕೈಚೀಲಗಳ (ಬಯೋಡಿಗ್ರೇಡಬಲ್ ಕ್ಯಾರಿ ಬ್ಯಾಗ್‌ಗಳು) ತಯಾರಿಕೆ, ದಾಸ್ತಾನು ಮತ್ತು ಮಾರಾಟಕ್ಕೆ ಸಚಿವ ಸಂಪುಟ ಸಮ್ಮತಿ ನೀಡಿದೆ. 2016ರ ಪ್ಲಾಸ್ಟಿಕ್ ನಿರ್ಬಂಧ ಅಧಿಸೂಚನೆಗೆ ತಿದ್ದುಪಡಿ ತರುವ ಮೂಲಕ ಈ ಅನುಮೋದನೆ ನೀಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಂಡ್ರೆ, 2016ರಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು, ಭಿತ್ತಿಪತ್ರಗಳು, ತೋರಣಗಳು, ಫ್ಲೆಕ್ಸ್‌ಗಳು, ಪ್ಲಾಸ್ಟಿಕ್ ತಟ್ಟೆಗಳು, ಲೋಟಗಳು, ಚಮಚಗಳು ಮತ್ತು ಪ್ಲಾಸ್ಟಿಕ್ ಹಾಳೆಗಳ ತಯಾರಿಕೆ, ಮಾರಾಟ ಮತ್ತು ದಾಸ್ತಾನನ್ನು ನಿಷೇಧಿಸಿತ್ತು. ಆದರೆ, ಇತ್ತೀಚೆಗೆ ಸಸ್ಯಜನ್ಯ ಕೈಚೀಲಗಳನ್ನು ಆವಿಷ್ಕರಿಸಲಾಗಿದ್ದು, ಇವು 180 ದಿನಗಳಲ್ಲಿ ಜೈವಿಕವಾಗಿ ಸಂಪೂರ್ಣವಾಗಿ ವಿಘಟನೆಯಾಗುತ್ತವೆ. ಈ ಪರಿಸರ ಸ್ನೇಹಿ ಕೈಚೀಲಗಳ ಮಾರಾಟಕ್ಕೆ ಅನುಕೂಲವಾಗುವಂತೆ ಅಧಿಸೂಚನೆಗೆ ತಿದ್ದುಪಡಿ ತರಲಾಗಿದ್ದು, ಇದಕ್ಕೆ ಸಂಪುಟ ಸಭೆಯು ಅನುಮೋದನೆ ನೀಡಿದೆ ಎಂದು ವಿವರಿಸಿದರು.
ಕೇಂದ್ರದ ನಿಯಮಗಳಿಗೆ ಅನುಗುಣವಾಗಿ ತಿದ್ದುಪಡಿ :
ಈ ಹಿಂದೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದ ಸಭೆಯಲ್ಲಿ 2016ರ ಅಧಿಸೂಚನೆಗೆ ತಿದ್ದುಪಡಿ ತರುವಂತೆ ಮತ್ತು ಕೇಂದ್ರ ಪರಿಸರ ಇಲಾಖೆಯ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾಗಿ ಸಚಿವ ಖಂಡ್ರೆ ಸ್ಮರಿಸಿದರು.

ಪರಿಸರಕ್ಕೆ ಹಾನಿಕಾರಕವಲ್ಲದ ಮತ್ತು ಜೈವಿಕವಾಗಿ ವಿಘಟನೆಯಾಗುವ (ಬಯೋ ಡೀಗ್ರೇಡಬಲ್ – ಕಂಪೋಸ್ಟಬಲ್) ಕೈಚೀಲಗಳು ಮತ್ತು ಮೊದಲೇ ಪ್ಯಾಕ್ ಮಾಡಿ ಸೀಲ್ ಮಾಡಿದ ಪ್ಯಾಕೇಜಿಂಗ್ ಪ್ಲಾಸ್ಟಿಕ್‌ಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಯು ಕೇಂದ್ರ ಸರ್ಕಾರದ 2021ರ ಆದೇಶಕ್ಕೆ ಸಂಪೂರ್ಣವಾಗಿ ಅನುಗುಣವಾಗಿದೆ. ಈ ನಿರ್ಧಾರವು ಪ್ಲಾಸ್ಟಿಕ್ ಮಾಲಿನ್ಯವನ್ನು ತಗ್ಗಿಸುವಲ್ಲಿ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಎಂದು ಅವರು ತಿಳಿಸಿದರು.





















