ಬೆಂಗಳೂರು, ಜು.15 www.bengaluruwire.com : ಕರ್ಣಾಟಕ ಬ್ಯಾಂಕ್‌ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ರಾಘವೇಂದ್ರ ಎಸ್. ಭಟ್ ಅವರನ್ನು ನೇಮಕ ಮಾಡಲಾಗಿದೆ. ಈ ಮಹತ್ವದ ನೇಮಕಾತಿಯು ಬ್ಯಾಂಕಿಂಗ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಬ್ಯಾಂಕ್‌ನ ಭವಿಷ್ಯದ ಬೆಳವಣಿಗೆಗೆ ಹೊಸ ಆಯಾಮ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.
ಜುಲೈ 16ರಿಂದ ಮುಂದಿನ ಮೂರು ತಿಂಗಳ ಕಾಲ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ. ಬ್ಯಾಂಕಿನ ಮುಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಥವಾ ಸೆಬಿ ನಿಯಮ 2015ರ ಪ್ರಕಾರ ಅಧಿಕಾರ ವಹಿಸಿಕೊಂಡ ಮೂರು ತಿಂಗಳ ಒಳಗೆ ಈ ನೇಮಕಕ್ಕೆ ಷೇರುದಾರರ ಅನುಮೋದನೆ ಪಡೆದುಕೊಳ್ಳಬೇಕಿದೆ.
ಬ್ಯಾಂಕ್‌ನಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿರುವ ಭಟ್ ಅವರು 1981ರಲ್ಲಿ ಕ್ಲರ್ಕ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ವಿವಿಧ ಹುದ್ದೆಗಳ ಮೂಲಕ ಮುನ್ನಡೆಯುತ್ತಾ, ಕಳೆದ ಜುಲೈ 1ರಿಂದ ಚಿಫ್ ಆಪರೇಟಿಂಗ್ ಅಧಿಕಾರಿ ಹುದ್ದೆ ಅಲಂಕರಿಸಿ ಈಗ ಬ್ಯಾಂಕಿನ ಮುಖ್ಯಸ್ಥರಾಗುತ್ತಿದ್ದಾರೆ. ನೌಕರರಲ್ಲಿ, ಡಿಜಿಟಲ್ ಬ್ಯಾಂಕಿಂಗ್, ಹಣಕಾಸು, ಮಾನವ ಸಂಪನ್ಮೂಲ, ಇನ್ಶುರೆನ್ಸ್, ಗ್ರಾಮೀಣ ಬ್ಯಾಂಕಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭಟ್ ಅವರು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ರಾಘವೇಂದ್ರ ಭಟ್ ಅವರು ತಮ್ಮ ಸುದೀರ್ಘ ಬ್ಯಾಂಕಿಂಗ್ ಅನುಭವ ಮತ್ತು ಆರ್ಥಿಕ ಕ್ಷೇತ್ರದ ಕುರಿತಾದ ಆಳವಾದ ಜ್ಞಾನದಿಂದ ಗುರುತಿಸಿಕೊಂಡಿದ್ದಾರೆ.
‘ನಂಬಿಕೆ ಹಾಗೂ ಸದ್ಭಾವನೆ ಬ್ಯಾಂಕಿನ ತಳಹದಿಯಾಗಿದ್ದು, ಶತಮಾನ ಪೂರೈಸಿರುವ ಬ್ಯಾಂಕಿನ ಅಡಿಪಾಯ ಇನ್ನಷ್ಟು ಗಟ್ಟಿಗೊಳಿಸಲು ಶ್ರಮಿಸುತ್ತೇನೆ’ ಎಂದು ರಾಘವೇಂದ್ರ ಭಟ್ ತಿಳಿಸಿದ್ದಾರೆ.

‘ರಾಘವೇಂದ್ರ ಭಟ್ ಅವರ ಅನುಭವ ಹಾಗೂ ಪರಿಣತಿಯು ಬ್ಯಾಂಕ್ ನಿರಂತರ ಬೆಳವಣಿಗೆಗೆ ಸಹಕಾರಿಯಾಗಲಿ’ ಎಂದು ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ಹೇಳಿದ್ದಾರೆ.
ಹಿಂದಿನ ಎಂ.ಡಿ ಹಾಗೂ ಸಿಇಓ ಶ್ರೀಕೃಷ್ಣನ್ ಹರಿಹರ ಶರ್ಮಾ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಈ ನೇಮಕ ಪ್ರಮುಖವಾಗಿದೆ.
ಈ ನೇಮಕಾತಿಯು ಬ್ಯಾಂಕಿನ ಷೇರುದಾರರು ಮತ್ತು ಗ್ರಾಹಕರಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಮೂಡಿಸಿದ್ದು, ಭವಿಷ್ಯದಲ್ಲಿ ಕರ್ಣಾಟಕ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂಬ ವಿಶ್ವಾಸವನ್ನು ಹೆಚ್ಚಿಸಿದೆ. ರಾಘವೇಂದ್ರ ಭಟ್ ಅವರ ನಾಯಕತ್ವದಲ್ಲಿ ಕರ್ಣಾಟಕ ಬ್ಯಾಂಕ್, ಡಿಜಿಟಲ್ ಯುಗದಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















