ಬೆಂಗಳೂರು, ಜು.15 www.bengaluruwire.com : ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಈ ದರ ಪರಿಷ್ಕರಣೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ಪರಿಷ್ಕೃತ ದರಗಳ ವಿವರ:
* ಕನಿಷ್ಠ ದರ: ಮೊದಲ 2.00 ಕಿ.ಮೀ.ಗೆ 36 ರೂ. (ಮೂರು ಜನ ಪ್ರಯಾಣಿಕರು).
* ನಂತರದ ಪ್ರತಿ ಕಿಲೋಮೀಟರ್ ದರ: 18 ರೂ. (ಮೂರು ಜನ ಪ್ರಯಾಣಿಕರು).

* ಕಾಯುವಿಕೆ ದರ:
* ಮೊದಲ ಐದು ನಿಮಿಷ ಉಚಿತ.
* ಮೊದಲ ಐದು ನಿಮಿಷದ ನಂತರ ಪ್ರತಿ ಹದಿನೈದು ನಿಮಿಷ ಅಥವಾ ಅದರ ಭಾಗಕ್ಕೆ 10 ರೂ.
* ಪ್ರಯಾಣಿಕರ ಲಗೇಜು ದರ:
* ಮೊದಲ 20 ಕೆ.ಜಿ.ಗೆ ಉಚಿತ.
* ಮೊದಲ 20 ಕೆ.ಜಿ.ಯಿಂದ ನಂತರ ಪ್ರತಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ 5.10 ರೂ.
* ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿ.ಗೆ.
* ರಾತ್ರಿ ವೇಳೆ ದರ (ರಾತ್ರಿ 10:00 ರಿಂದ ಬೆಳಗಿನ ಜಾವ 5:00 ಘಂಟೆಯವರೆಗೆ): ಸಾಮಾನ್ಯ ದರ + ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು.
ಮೀಟರ್ ಮರು ಸತ್ಯಾಪನೆ ಕಡ್ಡಾಯ:
ಪರಿಷ್ಕೃತ ದರಗಳು ಮೀಟರ್‌ನಲ್ಲಿ ಪ್ರದರ್ಶನವಾಗುವಂತೆ ಮೀಟರ್‌ಗಳನ್ನು 2025ರ ಅಕ್ಟೋಬರ್ 31ರೊಳಗೆ (90 ದಿನಗಳು) ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸೂಚಿಸಿದೆ. ಅಲ್ಲದೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು ಎಂದು ತಿಳಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ:
ಈ ದರ ಪರಿಷ್ಕರಣೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕದ ಉಸ್ತುವಾರಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮೊದಲು 2 ಕಿ.ಮೀ ತನಕ ₹30 ಇತ್ತು, ಈಗ ₹36ಕ್ಕೆ ಪರಿಷ್ಕರಿಸಿ ₹6 ಜಾಸ್ತಿ ಮಾಡಿದ್ದಾರೆ. ಇದು ಮಾಡೋಕಿಂತ ಸುಮ್ಮನಿರೋದೇ ಒಳ್ಳೇದಿತ್ತು” ಎಂದು ಅವರು ಹೇಳಿದ್ದಾರೆ. ಕೊರೊನಾಕ್ಕಿಂತ ಮುಂಚೆ ದರ ಪರಿಷ್ಕರಣೆ ಮಾಡಲಾಗಿತ್ತು ಎಂಬುದನ್ನು ಸ್ಮರಿಸಿರುವ ಅವರು, ಮೊದಲ 2 ಕಿ.ಮೀ ನಂತರ ಹಳೆಯ ದರ ಪ್ರತಿ ಕಿ.ಮೀಗೆ 15 ಇತ್ತು, ಈಗ 18₹ಕ್ಕೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಗೇಜ್ ಶುಲ್ಕದ ಬಗ್ಗೆ ಮಾತನಾಡಿದ ಕುಮಾರ್, “ಟ್ರಾಫಿಕ್‌ನವರು ಲಗೇಜ್ ಹಾಕಿದ್ರೆ ಫೈನ್ ಹಾಕ್ತಾರೆ. ಆದ್ರೆ ಸಾರಿಗೆ ಪ್ರಾಧಿಕಾರ 50 ಕೆಜಿ ತನಕ ಲಗೇಜ್ ಹಾಕಲು ಅವಕಾಶ ಕೊಟ್ಟಿದ್ದಾರೆ” ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ರ್ಯಾಪಿಡೋ ಬೈಕ್ ಟ್ಯಾಕ್ಸಿ ಬಂದ್ ಮಾಡಿದ ಮೇಲೆ ಬೇಕಂತ ಅಗ್ರಿಗೇಟರ್‌ಗಳು ಆಟೋ ಬಾಡಿಗೆ ಜಾಸ್ತಿ ಮಾಡಿ ಆಟೋ ದರಗಳ ಮೇಲೆ ಗೂಬೆ ಕೂರಿಸುವ ಹುನ್ನಾರ ಇದು ಎಂದು ಅವರು ಆರೋಪಿಸಿದ್ದಾರೆ.
“ಸಾರ್ವಜನಿಕರಿಗೆ ನಮ್ಮ ಮೇಲೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿರುವ ಹುನ್ನಾರ ಇದು. ಈಗಾಗಲೇ ಟ್ರಾಫಿಕ್, ಸಾರಿಗೆ ಇಲಾಖೆಯಿಂದ ಸಾವಿರಾರು ಆಟೋಗಳನ್ನು ಸೀಜ್ ಮಾಡಿಸಿದೆ. ಇದೆಲ್ಲಾ ಅಗ್ರಿಗೇಟರ್ ಕಿತಾಪತಿ. ಕಳೆದ ಒಂದು ವರ್ಷದಿಂದ ಆಟೋ ದರ ಪರಿಷ್ಕರಣೆ ಮಾಡುವಂತೆ ಬೇಡಿಕೆ ಇಟ್ಟಿದ್ದರೂ ಸುಮ್ಮನಿದ್ದ ಸಾರಿಗೆ ಇಲಾಖೆ ಇದೀಗ ಬೆಂಗಳೂರಿನಲ್ಲಿ ದರ ಪರಿಷ್ಕರಣೆ ಮಾಡಿದೆ” ಎಂದು ಕುಮಾರ್ ಕಿಡಿಕಾರಿದ್ದಾರೆ.
“ಈಗಿನ ಆಟೊ ದರವೇ ಹೆಚ್ಚಿದೆ. ಅಲ್ಲದೇ ಮಿನಿಮಮ್ ಮೇಲೆನೇ ಜಾಸ್ತಿ ತಗೊಂತಿದಾರೆ. ಆಟೋ ಪ್ರಯಾಣಿಕರಿಗೆ ಈ ದರ ಪರಿಷ್ಕರಣೆ ಜೋಬಿಗೆ ಸುಖಾಸುಮ್ಮನೆ ಭಾರ. ಒಲಾ, ಊಬರ್ ಆಟೋ ದರವೂ ಜಾಸ್ತಿಯಿದೆ. ಪ್ರಯಾಣಿಕರು ಕರೆದ ಕಡೆ ಆಟೋ ಚಾಲಕರು ಬರಲ್ಲ. ಕರೆದ ಕಡೆ ಬರಬೇಕೆಂದರೆ ಮತ್ತೆ ಹೆಚ್ಚುವರಿಯಾಗಿ ಹಣ ಕೊಡಬೇಕು” ಎನ್ನುತ್ತಾರೆ ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಎಂ.ವೆಂಕಟೇಶ್.






















