ಬೆಂಗಳೂರು, ಜು.10 www.bengaluruwire.com : ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಮಹತ್ವದ ನಿರ್ಧಾರದಲ್ಲಿ, ಈ ವರ್ಷ ನರ್ಸಿಂಗ್ ಕೋರ್ಸ್ ಶುಲ್ಕವನ್ನು ಹೆಚ್ಚಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದ ವಿಕಾಸಸೌಧದಲ್ಲಿ ಗುರುವಾರ ನಡೆದ ನರ್ಸಿಂಗ್ ಕಾಲೇಜುಗಳ ಸಂಘದೊಂದಿಗಿನ ಸಭೆಯಲ್ಲಿ ಈ ವಿಚಾರವನ್ನು ಖಡಾಖಂಡಿತವಾಗಿ ತಿಳಿಸಿದ ಸಚಿವರು, ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ತಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದರು. ಖಾಸಗಿ ನರ್ಸಿಂಗ್ ಕಾಲೇಜುಗಳು ಈ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ಸಚಿವರು ರವಾನಿಸಿದ್ದಾರೆ.
ಗ್ರಾಮೀಣ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ :
ಹೆಚ್ಚಿನ ನರ್ಸಿಂಗ್ ವಿದ್ಯಾರ್ಥಿಗಳು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಇವರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದು ಅನ್ಯಾಯ ಮತ್ತು ಸ್ವೀಕಾರಾರ್ಹವಲ್ಲ ಎಂದು ಸಚಿವರು ಪುನರುಚ್ಚರಿಸಿದರು.

ಸರ್ಕಾರಿ ಕೋಟಾದಡಿ ₹10,000, ಇತರೆ ಕೋಟಾದಡಿ ₹1 ಲಕ್ಷ, ಮತ್ತು ಕರ್ನಾಟಕೇತರ ವಿದ್ಯಾರ್ಥಿಗಳಿಗೆ ₹1.4 ಲಕ್ಷ ಶುಲ್ಕ ರಚನೆಯೇ ಈ ವರ್ಷವೂ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು. “ಅನುಮೋದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಯಾವುದೇ ಕಾಲೇಜು ವಿಧಿಸಬಾರದು. ಅಂಥ ಪ್ರಕರಣಗಳು ಕಂಡುಬಂದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಮತ್ತು ಅವುಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು” ಎಂದು ಸಚಿವರು ಕಠಿಣ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸುಮಾರು 35,000 ಸೀಟುಗಳನ್ನು ಹೊಂದಿರುವ 611 ನರ್ಸಿಂಗ್ ಕಾಲೇಜುಗಳಿವೆ. ಇವುಗಳಲ್ಲಿ ಶೇ. 80ರಷ್ಟು ಆಡಳಿತ ಮಂಡಳಿಯಿಂದ ಭರ್ತಿಯಾಗಿದ್ದು, ಶೇ. 20ರಷ್ಟು ಸರ್ಕಾರಿ ಕೋಟಾದ ಅಡಿ ಇವೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ದೇಶಕ ಎಚ್. ಪ್ರಸನ್ನ ಅವರಿಗೆ ಸಚಿವರು ನಿರ್ದೇಶನ ನೀಡಿದರು. ಹಂಚಿಕೆಯಾಗದ ಸೀಟುಗಳನ್ನು ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಾತ್ರ ನಿರ್ಧರಿಸುತ್ತದೆ, ಯಾವುದೇ ಅನಧಿಕೃತ ಬದಲಾವಣೆಗಳಿಗೆ ಅವಕಾಶವಿಲ್ಲ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.






















