ಬೆಂಗಳೂರು, ಜು.10 www.bengaluruwire.com : ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ “ಶಕ್ತಿ” ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 500 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸಿ, ಭಾರಿ ಯಶಸ್ಸು ಕಂಡಿದೆ. ಈ ಮೈಲಿಗಲ್ಲನ್ನು ಗುರುತಿಸಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ಜುಲೈ 14 ರಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಬಸ್ ಡಿಪೋಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಸಾಂಕೇತಿಕವಾಗಿ ಒಂದು ಬಸ್ಸಿಗೆ ಪೂಜೆ ಸಲ್ಲಿಸುವಂತೆ ಸೂಚಿಸಿದೆ.
ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಬರೆದ ಪತ್ರದಲ್ಲಿ, “ಶಕ್ತಿ ಯೋಜನೆ ಜಾರಿಗೆ ಬಂದ 2023ರ ಜೂ.11 ರಿಂದ 2025 ರ ಜುಲೈ 9ರವರೆಗೆ 500 ಕೋಟಿಗಿಂತಲೂ ಹೆಚ್ಚು ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದಿದ್ದಾರೆ. ಇದು ಸರ್ಕಾರದ ಜನಪರ ಕಾರ್ಯಕ್ರಮಗಳ ಯಶಸ್ಸಿಗೆ ಸಾಕ್ಷಿ. ಈ ಐತಿಹಾಸಿಕ ಸಾಧನೆಯನ್ನು ಆಚರಿಸಲು, ಜುಲೈ 14 ರಂದು ಬೆಳಿಗ್ಗೆ 10 ಗಂಟೆಗೆ ಎಲ್ಲಾ ಬಸ್ ಡಿಪೋಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಸಾಂಕೇತಿಕವಾಗಿ ಒಂದು ಬಸ್ಸಿಗೆ ಪೂಜೆ ಸಲ್ಲಿಸುವಂತೆ” ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಭಾಗವಹಿಸಬೇಕು. ಇದಲ್ಲದೆ, ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ಸಂಸದರು ಮತ್ತು ಸಚಿವರನ್ನು ಆಹ್ವಾನಿಸುವಂತೆ ನಿರ್ದೇಶಿಸಲಾಗಿದೆ. ಈ ಮೂಲಕ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಇದೇ ಪತ್ರದಲ್ಲಿ ತಿಳಿಸಲಾಗಿದೆ.





















