ನವದೆಹಲಿ, ಜು.10 www.bengaluruwire.com : ಕರ್ನಾಟಕಕ್ಕೆ ಎರಡು ಪ್ರತ್ಯೇಕ ರಕ್ಷಣಾ ಕಾರಿಡಾರ್‌ಗಳನ್ನು ಮಂಜೂರು ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಬುಧವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ ಧಾರವಾಡ-ಬೆಳಗಾವಿ-ವಿಜಯಪುರ ಜಿಲ್ಲೆಗಳಲ್ಲಿ ಈ ಕಾರಿಡಾರ್‌ಗಳನ್ನು ಸ್ಥಾಪಿಸುವಂತೆ ನಿಯೋಗವು ಪ್ರಬಲವಾಗಿ ಒತ್ತಾಯಿಸಿದೆ.
ಈ ನಿಯೋಗದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಇಂಧನ ಸಚಿವ ಕೆ.ಜೆ. ಜಾರ್ಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಉಪಸ್ಥಿತರಿದ್ದರು.
ಕರ್ನಾಟಕದ ರಕ್ಷಣಾ ವಲಯದ ಬೃಹತ್ ಕೊಡುಗೆ:

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು 2018ರಲ್ಲಿ ಉತ್ತರಪ್ರದೇಶ ಮತ್ತು ತಮಿಳುನಾಡಿಗೆ ಡಿಫೆನ್ಸ್ ಕಾರಿಡಾರ್‌ಗಳನ್ನು ಮಂಜೂರು ಮಾಡಿದೆ. ಆದರೆ, ದೇಶದ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯದಲ್ಲಿ ಕರ್ನಾಟಕವು ಶೇ.75ರಷ್ಟು ಪಾಲು ಹೊಂದಿದ್ದು, ಜಾಗತಿಕವಾಗಿ ಮೂರನೇ ಅತ್ಯುತ್ತಮ ಕಾರ್ಯಪರಿಸರ ಹೊಂದಿರುವ ಹೆಗ್ಗಳಿಕೆ ಗಳಿಸಿದೆ ಎಂದು ರಕ್ಷಣಾ ಸಚಿವರ ಗಮನಕ್ಕೆ ತಂದರು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ತಲಾ ಒಂದೊಂದು ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡುವುದರಿಂದ ಇದು ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಅವರು ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ಸಹ ಪೂರಕ ಮಾಹಿತಿಗಳನ್ನು ಒದಗಿಸಿದರು.
ಉತ್ತರ ಕರ್ನಾಟಕದ ರಕ್ಷಣಾ ಉತ್ಪಾದನಾ ಕೇಂದ್ರಗಳು:
ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಾಲೂ ಫೋರ್ಜ್, ಏಕಸ್, ಬಿಕಾರ್ ಏರೋಸ್ಪೇಸ್, ವಾಲ್‌ಚಂದ್ ನಗರ್ ಇಂಡಸ್ಟ್ರೀಸ್ ಮುಂತಾದ ಪ್ರಮುಖ ರಕ್ಷಣಾ ವಲಯದ ಉತ್ಪಾದನಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಿಯೋಗವು ಎತ್ತಿ ತೋರಿಸಿತು. ಇದರ ಜೊತೆಗೆ, ಬೆಳಗಾವಿಯಲ್ಲಿ 250 ಎಕರೆ ವಿಸ್ತೀರ್ಣದಲ್ಲಿ ದೇಶದ ಪ್ರಪ್ರಥಮ ಪ್ರಿಸಿಶನ್ ಉತ್ಪಾದನೆಯ ವಿಶೇಷ ಆರ್ಥಿಕ ವಲಯ (SEZ) ಸಕ್ರಿಯವಾಗಿದೆ. ಇಲ್ಲಿ 31 ಘಟಕಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ ಎಂದು ನಿಯೋಗವು ಮಾಹಿತಿ ನೀಡಿತು.
ದಕ್ಷಿಣ ಕರ್ನಾಟಕದ ವೈಮಾನಿಕ ಶಕ್ತಿ:
ಇನ್ನು ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾರ್ವಜನಿಕ ವಲಯದ ಎಚ್‌ಎಎಲ್, ಕಾಲಿನ್ಸ್ ಏರೋಸ್ಪೇಸ್, ಡೈನಮ್ಯಾಟಿಕ್ ಟೆಕ್ನಾಲಜೀಸ್, ಸೆಂಟಮ್, ಸಾಸ್ಮೋಸ್, ಬೆಲ್ಲಾಟ್ರಿಕ್ಸ್ ಮುಂತಾದ ಪ್ರಮುಖ ರಕ್ಷಣಾ ಸಾಮಗ್ರಿ ಮತ್ತು ವೈಮಾಂತರಿಕ್ಷ ಕಂಪನಿಗಳಿವೆ. ಟಿಎಎಸ್‌ಎಲ್ ತನ್ನ ಅಂತಿಮ ಜೋಡಣಾ ಘಟಕವನ್ನು ಇಲ್ಲಿ ಆರಂಭಿಸುತ್ತಿದೆ.
ಏರ್ ಇಂಡಿಯಾ ಮತ್ತು ಇಂಡಿಗೋ ಕಂಪನಿಗಳು ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ತಮ್ಮ ಎಂಆರ್‌ಒ (Maintenance, Repair, and Overhaul) ಘಟಕಗಳನ್ನು ಬೆಂಗಳೂರಿನ ಸಮೀಪದಲ್ಲಿ ಸ್ಥಾಪಿಸುತ್ತಿವೆ. ದೇವನಹಳ್ಳಿಯಲ್ಲಿ 2 ಸಾವಿರ ಎಕರೆ ವಿಸ್ತಾರದ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸಹ ಕಾರ್ಯನಿರ್ವಹಿಸುತ್ತಿದೆ. ಈ ಭಾಗದಲ್ಲಿ ದೇಶದ ಏರ್‌ಕ್ರಾಫ್ಟ್ ಮತ್ತು ಸ್ಪೇಸ್‌ಕ್ರಾಫ್ಟ್ ವಲಯದ ಶೇಕಡ 25ರಷ್ಟು ತಯಾರಿಕೆ ನಡೆಯುತ್ತಿದೆ. ವಿಮಾನ ಮತ್ತು ಹೆಲಿಕಾಪ್ಟರ್ ತಯಾರಿಕೆಯಲ್ಲಿ ರಾಜ್ಯದ ಕೊಡುಗೆ ಶೇ.67ರಷ್ಟಿದೆ ಎಂಬುದನ್ನೂ ನಿಯೋಗವು ರಕ್ಷಣಾ ಸಚಿವರಿಗೆ ಮನದಟ್ಟು ಮಾಡಿಕೊಟ್ಟಿತು.
ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಕರ್ನಾಟಕಕ್ಕೆ ಎರಡು ಪ್ರತ್ಯೇಕ ಡಿಫೆನ್ಸ್ ಕಾರಿಡಾರ್‌ಗಳನ್ನು ಮಂಜೂರು ಮಾಡಬೇಕೆಂದು ನಿಯೋಗವು ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿತು. ಮನವಿ ಸ್ವೀಕರಿಸಿದ ರಾಜನಾಥ್ ಸಿಂಗ್, ಈ ಪ್ರಸ್ತಾವನೆಗಳನ್ನು ಸೂಕ್ತವಾಗಿ ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.





















