ಬೆಂಗಳೂರು, ಜು.09 www.bengaluruwire.com : ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿ ಮಾಡಿ ಸರಕು ಮತ್ತು ಸೇವಾ ತೆರಿಗೆ (GST) ವಂಚಿಸುತ್ತಿದ್ದ ಬೃಹತ್ ಅಂತರರಾಜ್ಯ ಜಾಲವನ್ನು ರಾಜ್ಯ ವಾಣಿಜ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಅಕ್ರಮ ಜಾಲದಿಂದ ₹39 ಕೋಟಿ ತೆರಿಗೆ ವಸೂಲಿಗೆ ಕ್ರಮ ಕೈಗೊಂಡಿದ್ದಾರೆ.
ಸಾಮಾನ್ಯ ಜನರ ಆಧಾರ್ ಮತ್ತು ಪಾನ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಜಿಎಸ್‌ಟಿ ನೋಂದಣಿ ಮಾಡಿ ತೆರಿಗೆ ವಂಚಿಸುತ್ತಿರುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿರುವ ಬಗ್ಗೆ 2023ರಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಈ ಜಾಲದ ಮುಖ್ಯ ರೂವಾರಿ ಕೈಲಾಶ್ ಬೀಷ್ಟೋಯಿ ಎಂಬಾತನನ್ನು ಬಂಧಿಸಿದ್ದಾರೆ.
ಹತ್ತು ಬ್ಯಾಂಕ್ ಖಾತೆಗಳ ತೆರೆಯುವ ಯತ್ನದಿಂದ ಭೇದಿಸಿದ ಜಾಲ :
ನಗರದ ಮುರುಗೇಶಪಾಳ್ಯದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲ ವ್ಯಕ್ತಿಗಳು ಇತರರ ಆಧಾರ್ ಕಾರ್ಡ್ ಮತ್ತು ಪಾನ್ ವಿವರಗಳನ್ನು ಬಳಸಿ ಒಂದೇ ದಿನ ಹತ್ತು ಬ್ಯಾಂಕ್ ಖಾತೆಗಳನ್ನು ತೆರೆಯಲು ಯತ್ನಿಸಿದ್ದರು. ಈ ಬಗ್ಗೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಜೀವನಬಿಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಾಗ ಅಂತರರಾಜ್ಯ ಜಾಲ ಬೆಳಕಿಗೆ ಬಂದಿದೆ.

ಕರ್ನಾಟಕ ಕೇಂದ್ರಿತ ಚಟುವಟಿಕೆಗಳು :
“ಈ ಜಾಲವು ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿತ್ತು. ಕರ್ನಾಟಕವನ್ನೇ ಕೇಂದ್ರವಾಗಿ ಇರಿಸಿಕೊಂಡು ಕೈಲಾಶ್ ತನ್ನ ಕಾರ್ಯಾಚರಣೆ ನಡೆಸುತ್ತಿದ್ದ. ಕರ್ನಾಟಕದಲ್ಲಿಯೇ 17 ಕಂಪನಿಗಳನ್ನು ನೋಂದಣಿ ಮಾಡಿಸಿದ್ದ ಆತ, ಈ ಕಂಪನಿಗಳ ಹೆಸರಿನಲ್ಲಿ ಕಬ್ಬಿಣದ ಗುಜರಿ ವ್ಯವಹಾರದಲ್ಲಿ ತೊಡಗಿರುವ ಕಂಪನಿಗಳಿಗೆ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿಕೊಟ್ಟಿದ್ದ” ಎಂದು ವಾಣಿಜ್ಯ ತೆರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸಹಚರನ ಬಂಧನದಿಂದ ಸಿಕ್ಕ ಸುಳಿವು :
“2024ರ ಡಿಸೆಂಬರ್ ವೇಳೆಗೆ ಕೈಲಾಶ್‌ನ ಸಹಚರ ರೋಹಿತ್ ಎಂಬಾತನನ್ನು ಬಂಧಿಸಲಾಗಿತ್ತು. ಕೈಲಾಶ್‌ನ ಕರ್ನಾಟಕದಲ್ಲಿನ ವ್ಯವಹಾರಗಳನ್ನು ರೋಹಿತ್ ನೋಡಿಕೊಳ್ಳುತ್ತಿದ್ದ. ಆತ ನೀಡಿದ ಮಾಹಿತಿಯ ಮೇರೆಗೆ ಕೈಲಾಶ್‌ನ ಬಂಧನಕ್ಕೆ ಕಾರ್ಯಾಚರಣೆ ರೂಪಿಸಲಾಗಿತ್ತು” ಎಂದು ಮಾಹಿತಿ ನೀಡಲಾಗಿದೆ. ರೋಹಿತ್ ಬಂಧನದ ಬೆನ್ನಲ್ಲೇ ಕೈಲಾಶ್ ತಲೆಮರೆಸಿಕೊಂಡಿದ್ದ. ಆನಂತರ ಆತ ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಪ್ರಯಾಣ ಮಾಡಿದ್ದ. ಈ ಅವಧಿಯಲ್ಲಿ ಆತ ತನ್ನ ಸ್ಥಳ ಪತ್ತೆಯಾಗಬಾರದು ಎಂದು 14 ಮೊಬೈಲ್‌ಗಳನ್ನು ಬದಲಾಯಿಸಿದ್ದ ಎಂದು ವಿವರಿಸಲಾಗಿದೆ.
ರಾಜಸ್ಥಾನದಲ್ಲಿ ಕೊನೆಗೂ ಸೆರೆ :
“ಆತ ರಾಜಸ್ಥಾನದ ಜಾಲೋರ್‌ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿತು. ಅಲ್ಲಿನ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು. ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿ, ಕಸ್ಟಡಿಗೆ ಪಡೆಯಲಾಗಿದೆ” ಎಂದು ಇಲಾಖೆ ತಿಳಿಸಿದೆ.
₹208 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್‌ಗಳು:
* ಖೊಟ್ಟಿ ಕಂಪನಿಗಳ ಹೆಸರಿನಲ್ಲಿ ಒಟ್ಟು ₹208 ಕೋಟಿ ಮೌಲ್ಯದ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಲಾಗಿದೆ.
* ಈ ನಕಲಿ ಇನ್‌ವಾಯ್ಸ್‌ಗಳನ್ನು ಬೇರೆ-ಬೇರೆ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ.
* ಆ ಇನ್‌ವಾಯ್ಸ್‌ಗಳನ್ನು ಸಲ್ಲಿಸಿರುವ ಕಂಪನಿಗಳು, ಒಟ್ಟು ₹39 ಕೋಟಿಯಷ್ಟು ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಂಡಿವೆ.
* ಕಬ್ಬಿಣ ಮತ್ತು ಇತರ ಗುಜರಿ ವಸ್ತುಗಳ ಮಾರಾಟ ಹಾಗೂ ಸಾಗಣೆ ವ್ಯವಹಾರದಲ್ಲಿ ತೊಡಗಿರುವ ಕಂಪನಿಗಳೇ ಇಂತಹ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡಿವೆ.
* ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಈ ಜಾಲ ಸಕ್ರಿಯವಾಗಿತ್ತು ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.





















