ಬೆಂಗಳೂರು, ಜು.08 www.bengaluruwire.com : ನಗರವಾಸಿಗಳಿಗೆ ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯುತ್ ಮೀಟರ್‌ಗಳ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಇನ್ನುಮುಂದೆ ಅತ್ಯಂತ ಸರಳವಾಗಲಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಂಟಿಯಾಗಿ ‘ಆಟೋಮೆಟಿಕ್ ನೇಮ್ ಚೇಂಜ್ ಟ್ರಿಗರ್’ ಎಂಬ ಆನ್‌ಲೈನ್ ಪೋರ್ಟಲ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದು, ಆಸ್ತಿ ಗುರುತಿನ ಚೀಟಿ (Property ID) ಆಧಾರದ ಮೇಲೆ ಮೀಟರ್ ವರ್ಗಾವಣೆಗಳು ನಡೆಯಲಿವೆ.
ನಗರದಲ್ಲಿ ಆಸ್ತಿ ಹೆಸರು ವರ್ಗಾವಣೆ ಸಮಸ್ಯೆ ಆಳವಾಗಿ ಬೇರೂರಿತ್ತು. ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳು ಮತ್ತು ವಸತಿ ಸಮುಚ್ಚಯಗಳಲ್ಲಿ ವಾಸಿಸುವ ಜನರು ಕಟ್ಟಡ ಮಾಲೀಕರಿಂದ ಅಥವಾ ಜಾಗದ ಮಾಲೀಕರಿಂದ ಮೀಟರ್ ಒಡೆತನ ಪಡೆಯಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇನ್ನುಮುಂದೆ, ಈ ಹೊಸ ಆನ್‌ಲೈನ್ ವ್ಯವಸ್ಥೆಯ ಮೂಲಕ ಯಾವುದೇ ತೊಂದರೆಗಳಿಲ್ಲದೆ ಸುಲಭವಾಗಿ ಮಾಲೀಕತ್ವವನ್ನು ವರ್ಗಾಯಿಸಿಕೊಳ್ಳಬಹುದಾಗಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಮತ್ತು ಬಿಬಿಎಂಪಿಯ ಇ-ಖಾತಾ ಆನ್‌ಲೈನ್ ವ್ಯವಸ್ಥೆ ಈ ಸುಧಾರಣೆಗೆ ಪ್ರಮುಖ ಪ್ರೇರಣೆಯಾಗಿವೆ. ಇ-ಖಾತಾ ಕಡ್ಡಾಯವಾದಾಗಿನಿಂದ, ಮೀಟರ್ ಹೆಸರು ಬದಲಾವಣೆಗೆ ಬೆಸ್ಕಾಂ ಉಪವಿಭಾಗ ಕಚೇರಿಗಳಿಗೆ ಬರುವ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಇದು ಬೆಸ್ಕಾಂ ಸಿಬ್ಬಂದಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಈಗ, ಹೊಸ ಆನ್‌ಲೈನ್ ಪೋರ್ಟಲ್‌ನ ಸಹಾಯದಿಂದ, ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಜಗಳಮುಕ್ತವಾಗಿ ಮೀಟರ್ ಹೆಸರು ಬದಲಾವಣೆಯನ್ನು ಮಾಡಿಕೊಳ್ಳುವುದು ಸಾಧ್ಯವಾಗಲಿದೆ. ಈ ಕ್ರಮದಿಂದ ನಾಗರಿಕರಿಗೆ ಸಮಯ ಮತ್ತು ಹಣದ ಉಳಿತಾಯವಾಗಲಿದ್ದು, ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ.





















