ಬೆಂಗಳೂರು, ಜು.08 www.bengaluruwire.com : ಅನ್ನಭಾಗ್ಯ ಯೋಜನೆಯಡಿ ಲಾರಿ ಮಾಲೀಕರ ಸಾಗಾಣಿಕೆ ವೆಚ್ಚ, ಸಗಟು ಮತ್ತು ಚಿಲ್ಲರೆ ಲಾಭಾಂಶ ಪಾವತಿಗೆ ಬಾಕಿ ಇದ್ದ ಅನುದಾನವನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಅವರು ಮುಷ್ಕರವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
2025ರ ಫೆಬ್ರವರಿಯಿಂದ ಮೇ ತಿಂಗಳವರೆಗಿನ ಸಾಗಾಣಿಕೆ ವೆಚ್ಚ, ಸಗಟು ಮತ್ತು ಚಿಲ್ಲರೆ ಲಾಭಾಂಶ ಪಾವತಿಗಾಗಿ ರೂ. ₹244.10 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಅನುದಾನವು ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಯನ್ನು ಹೊರತುಪಡಿಸಿ, ಪ್ರಾಸಂಗಿಕ ಶುಲ್ಕಗಳಿಗಾಗಿ ಮೀಸಲಾಗಿದೆ. ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಫೆಬ್ರವರಿ ತಿಂಗಳಿನಿಂದ ಮೇ ವರೆಗಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಈ ಹಿಂದೆ, ಫೆಬ್ರವರಿ 2025 ರಿಂದ ಮೇ 2025 ರವರೆಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿ ಮತ್ತು ಇತರ ಪ್ರಾಸಂಗಿಕ ಶುಲ್ಕಗಳಾದ ಸಗಟು ಮತ್ತು ಚಿಲ್ಲರೆ ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗಾಗಿ ರೂ. 2082.99 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮ ನಿಯಮಿತದ ಬಳಿ ರೂ. 21.79 ಕೋಟಿ ಉಳಿಕೆಯಾಗಿದ್ದರೂ, ಫೆಬ್ರವರಿಯಿಂದ ಮೇ ರವರೆಗಿನ ಅವಧಿಗೆ ಸಗಟು/ಚಿಲ್ಲರೆ ಲಾಭಾಂಶ ಮತ್ತು ಸಾಗಾಣಿಕೆ ವೆಚ್ಚಕ್ಕಾಗಿ ಅನುದಾನದ ಕೊರತೆಯಿದೆ ಎಂದು ತಿಳಿಸಲಾಗಿತ್ತು.
2025ರ ಫೆಬ್ರವರಿಯಿಂದ ಮೇ ರವರೆಗಿನ ಒಟ್ಟು ಸಾಗಾಣಿಕೆ, ಸಗಟು ಮತ್ತು ಚಿಲ್ಲರೆ ಲಾಭಾಂಶದ ಅಂದಾಜು ವೆಚ್ಚ 265.89 ಕೋಟಿ ರೂ. ಎಂದು ವರದಿಯಾಗಿದೆ. ಸರ್ಕಾರವು ಪ್ರಸ್ತುತ ಬಿಡುಗಡೆ ಮಾಡಿರುವ ರೂ. 244.10 ಕೋಟಿ ರೂ.ಗಳ ಅನುದಾನವನ್ನು ಖಜಾನೆ-2 ತಂತ್ರಾಂಶದ ಮೂಲಕ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಅವರಿಗೆ ಬಿಡುಗಡೆ ಮಾಡಲು ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಹೊರಡಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಸಾಗಾಣಿಕೆ ಮತ್ತು ವಿತರಣೆಯಲ್ಲಿ ತೊಡಗಿರುವ ಲಾರಿ ಮಾಲೀಕರು ಮತ್ತು ವಿತರಕರಿಗೆ ಆರ್ಥಿಕ ನೆರವು ಸಿಕ್ಕಂತಾಗಿದೆ.





















