ಬೆಂಗಳೂರು, ಜು.08 www.bengaluruwire.com : ನಗರದ ಪ್ರತಿಷ್ಠಿತ ಅಭಿಮಾನ್ ಸ್ಟುಡಿಯೋ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿ.ಎಸ್.ಎಸ್. ಅಭಿಮಾನ್ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದೆ.
ಸ್ಟುಡಿಯೋದ 10 ಎಕರೆ ಜಾಗವನ್ನು ಮಾರಾಟ ಮಾಡಿ, ಅದನ್ನು ಅಭಿವೃದ್ಧಿಪಡಿಸದೆ ಬೆಂಗಳೂರು ನಗರದ ವಿಶೇಷ ಜಿಲ್ಲಾಧಿಕಾರಿಗಳು 2003ರ ಜುಲೈ 16ರಂದು ಹೊರಡಿಸಿದ್ದ ಷರತ್ತುಬದ್ಧ ಆದೇಶವನ್ನು ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.
ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಟಿ.ರಾಜುಗೌಡ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ, “ಅಭಿಮಾನ್ ಸ್ಟುಡಿಯೋವನ್ನು ಟಿ.ಎನ್. ಬಾಲಕೃಷ್ಣ ಅವರಿಗೆ 1970ರ ಮಾರ್ಚ್ 27ರಂದು ಷರತ್ತುಗಳೊಂದಿಗೆ ಮಂಜೂರು ಮಾಡಲಾಗಿತ್ತು. ಸ್ಟುಡಿಯೋಕ್ಕಾಗಿ ಮಂಜೂರಾಗಿದ್ದ 20 ಎಕರೆ ಜಮೀನಿನಲ್ಲಿ, 10 ಎಕರೆ ಜಮೀನನ್ನು ಮಾರಾಟ ಮಾಡಿ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಬಳಸಲು ಬಾಲಕೃಷ್ಣ ಅವರ ಮಕ್ಕಳಿಗೆ 2003ರಲ್ಲಿ ಅನುಮತಿ ನೀಡಲಾಗಿತ್ತು. ಆದರೆ, ಸ್ಟುಡಿಯೋ ಮಾಲೀಕರು ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ” ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಸುಮಾರು 55 ವರ್ಷಗಳ ಹಿಂದೆ ಹಾಕಿದ ಶೀಟ್‌ಗಳು ಹಾಗೆಯೇ ಇದ್ದು, ಮಳೆ ಬಂದರೆ ಸೋರುತ್ತಿದೆ. ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿದ್ದು, ಚಿತ್ರೀಕರಣಕ್ಕೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.


ಅಲ್ಲದೆ, ಸ್ಟುಡಿಯೋ ಆವರಣದ ಸುತ್ತಮುತ್ತ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಟ್ರಸ್ಟ್ ಗಂಭೀರ ಆರೋಪ ಮಾಡಿದೆ. ಡಾ. ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದ 10 ಗುಂಟೆ ಪುಣ್ಯಭೂಮಿ ಜಾಗವನ್ನು ಪೂಜಾ ಕಾರ್ಯಕ್ರಮಗಳಿಗೆ ಬಳಸಲು ಅಭಿಮಾನ್ ಸ್ಟುಡಿಯೋ ಮಾಲೀಕರು 2017ರ ಡಿಸೆಂಬರ್ 19ರಂದು ಸರ್ಕಾರಕ್ಕೆ ಒಪ್ಪಿಗೆ ಪತ್ರ ನೀಡಿದ್ದರೂ, ಈಗ ಆ ಜಾಗದಲ್ಲಿ ಡಾ.ವಿಷ್ಣುವರ್ಧನ್ ಕಾರ್ಯಕ್ರಮ ನಡೆಸಲು ತೊಂದರೆ ನೀಡುತ್ತಿದ್ದಾರೆ ಎಂದು ಟ್ರಸ್ಟ್ ಹೇಳಿದೆ.
2024ರ ಜನವರಿ 6ರಿಂದ ಡಾ. ವಿಷ್ಣುವರ್ಧನ್ ಮಂದಿರದಲ್ಲಿದ್ದ ಎರಡು ದೊಡ್ಡ ಗಂಟೆಗಳು ಹಾಗೂ 12×12 ಅಡಿ ಗಾತ್ರದ ಎರಡು ಬ್ಯಾನರ್ ಬೋರ್ಡ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಟ್ರಸ್ಟ್ ದೂರಿದೆ.
2024ರ ಸೆಪ್ಟೆಂಬರ್ 18ರಂದು ನಡೆದ ಜನ್ಮದಿನೋತ್ಸವ ಮತ್ತು ಡಿಸೆಂಬರ್ 30ರಂದು ನಡೆದ ಪುಣ್ಯಸ್ಮರಣೆ ಪೂಜಾ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿ, ಹಲ್ಲೆ ಹಾಗೂ ನಿಂದನೆ ಮಾಡಿರುವ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ 2025ರ ಜನವರಿ 29ರಂದು ಎಫ್‌ಐಆರ್ ದಾಖಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತಂತೆ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಡಾ. ವೆಂಕಟೇಶಯ್ಯ ಅವರು ಈ ಮನವಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದು, ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಡಾ. ವಿಷ್ಣುವರ್ಧನ್ ಅವರ 75ನೇ ವರ್ಷದ ಜನ್ಮದಿನೋತ್ಸವ ಮತ್ತು ಅಮೃತ ಮಹೋತ್ಸವ ಕಾರ್ಯಕ್ರಮವನ್ನು 2025ರ ಸೆಪ್ಟೆಂಬರ್ 18ರಂದು ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ಪುಣ್ಯಭೂಮಿ ಜಾಗದಲ್ಲಿ ನಡೆಸಲು ಟ್ರಸ್ಟ್ ಜಿಲ್ಲಾಧಿಕಾರಿಗಳ ಅನುಮತಿ ಕೋರಿದೆ. ಕಳೆದ ಮೂರು ವರ್ಷಗಳಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಪುಣ್ಯಸ್ಮರಣೆ ಹಾಗೂ ಜನ್ಮದಿನೋತ್ಸವ ಕಾರ್ಯಕ್ರಮಗಳಿಗೆ ಅನುಮತಿ ನೀಡಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ಈ ಬಾರಿ ಸಹ ಕಾರ್ಯಕ್ರಮಕ್ಕೆ ಅನುಮತಿ ಹಾಗೂ ಸುಗಮವಾಗಿ ನಡೆಸಲು ಆದೇಶ ನೀಡುವಂತೆ ಟ್ರಸ್ಟ್ ಮನವಿ ಮಾಡಿದೆ. ಅಲ್ಲದೆ, ಡಾ.ವಿಷ್ಣುವರ್ಧನ್ ಅವರ ಮಂಟಪದ ಒಂದು ಆಧಾರಸ್ತಂಭ ಶಿಥಿಲಾವಸ್ಥೆಯಲ್ಲಿದ್ದು, ಅದರ ದುರಸ್ತಿಗೂ ಅನುಮತಿ ನೀಡಬೇಕೆಂದು ವಿ.ಎಸ್.ಎಸ್.ಅಭಿಮಾನ್ ಡಾ.ವಿಷ್ಣುವರ್ಧನ್ ಪುಷ್ಯಭೂಮಿ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರನ್ನು ಕೋರಿದೆ. ಒಟ್ಟಿನಲ್ಲಿ ಸೆಪ್ಟೆಂಬರ್ ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜನ್ಮದಿನೋತ್ಸವ ಕಾರ್ಯಕ್ರಮ ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ವಿಜೃಂಭಣೆಯಿಂದ ನಡೆಯುತ್ತಾ? ಅಥವಾ ಇಲ್ಲವಾ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.





















