ಬೆಂಗಳೂರು, ಜು.06 www.bengaluruwire.com : ರಾಜ್ಯ ಸರ್ಕಾರದ ಗ್ಯಾರಂಟಿ ಭಾಗ್ಯಗಳ ಪರಿಣಾಮ ಅಬಕಾರಿ ವಿವಿಧ ರೀತಿಯ ಶುಲ್ಕಗಳು, ಮೆಟ್ರೋ, ಬಸ್ ಪ್ರಯಾಣ ದರ ಏರಿಕೆ ಹೀಗೆ ಬೆಲೆ ಏರಿಕೆಯ ಸರದಿಗೆ ಗ್ರಾಮ ಪಂಚಾಯಿತಿಯೂ ಈಗ ಸೇರ್ಪಡೆಯಾಗುತ್ತಿದೆ. ರಾಜ್ಯದಲ್ಲಿ ಗ್ತಾಮ ಪಂಚಾಯಿತಿಗಳ ವ್ಯಾಪ್ತಿಯ ಅಪಾರ್ಟ್ ಮೆಂಟ್, ವಿಲ್ಲಾ, ವಾಣಿಜ್ಯ ಸಂಕೀರ್ಣ, ಮಾಲ್, ವಸತಿಯೇತರ ಕಟ್ಟಡ ಹಾಗೂ ಬಹುಮಾಲೀಕತ್ವದ ಕಟ್ಟಡಗಳ ಆಸ್ತಿ ತೆರಿಗೆ ಶೀಘ್ರದಲ್ಲೇ ಹೆಚ್ಚಳವಾಗಲಿದೆ.
ಈ ಕುರಿತಂತೆ ರಾಜ್ಯ ಸರ್ಕಾರ, ‘ಕರ್ನಾಟಕ ರಾಜ್ಯ ಸ್ವರಾಜ್ ಹಾಗೂ ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ, ಫೀಜುಗಳ) ನಿಯಮಗಳು-2025’ ಕರಡು ಅಧಿಸೂಚನೆ ಹೊರಡಿಸಿದೆ. ಇಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.
ಕರಡು ನಿಯಮಗಳ ಪ್ರಮುಖಾಂಶಗಳು ಮತ್ತು ಬದಲಾವಣೆಗಳು:
ಹೊಸ ನಿಯಮಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ನಿರ್ಧರಣೆ ಮತ್ತು ಸಂಗ್ರಹಣೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿವೆ. ಪ್ರಸ್ತುತ ದರಗಳು ಮತ್ತು ಪರಿಷ್ಕರಿಸಿದ ದರಗಳನ್ನು ನೇರವಾಗಿ ಈ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸದಿದ್ದರೂ, ತೆರಿಗೆಯನ್ನು “ಸ್ವತ್ತಿನ ಬಂಡವಾಳ ಮೌಲ್ಯದ ಆಧಾರದಲ್ಲಿ ಕೋಷ್ಟ್ರಗಳಲ್ಲಿ ತೋರಿಸಿರುವ ದರದಂತೆ” ವಿಧಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ, ಆಸ್ತಿಗಳ ಮೂಲ ಮೌಲ್ಯವನ್ನು ಆಧರಿಸಿ ತೆರಿಗೆ ವಿಧಿಸಲಾಗುವುದು.

ತೆರಿಗೆ ವಿಧಿಸುವ ಪ್ರಕ್ರಿಯೆ ಮತ್ತು ಹೊಸ ವ್ಯಾಪ್ತಿ:
ಪ್ರತಿಯೊಂದು ಗ್ರಾಮ ಪಂಚಾಯಿತಿಯು ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ತನ್ನ ವ್ಯಾಪ್ತಿಯಲ್ಲಿ ತೆರಿಗೆಗೆ ಒಳಪಡದ ಎಲ್ಲಾ ಆಸ್ತಿಗಳ ಸಮೀಕ್ಷೆ ನಡೆಸಿ, ಏಪ್ರಿಲ್ 1ರಿಂದ ಅವುಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಬೇಕು. ಕಟ್ಟಡಗಳಿಗೆ ಬಳಕೆಯೋಗ್ಯ ಪ್ರಮಾಣಪತ್ರ (Occupancy Certificate) ನೀಡಿದ ದಿನಾಂಕದಿಂದಲೇ ಕಟ್ಟಡವನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ.
ಹೊಸದಾಗಿ ತೆರಿಗೆ ವ್ಯಾಪ್ತಿಗೆ ಬರುವ ಆಸ್ತಿಗಳ ವಿವರಗಳನ್ನು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಚೇರಿ ಹಾಗೂ ಗ್ರಾಮದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಿ, ಏಳು ದಿನಗಳ ಕಾಲ ಆಕ್ಷೇಪಣೆ ಆಹ್ವಾನಿಸಲಾಗುವುದು.
ಇ-ಆಸ್ತಿ ಮತ್ತು ಆನ್‌ಲೈನ್ ಪಾವತಿ:
ಆಸ್ತಿ ಮಾಲೀಕರು ತೆರಿಗೆ, ದರ ಮತ್ತು ಫೀಜುಗಳನ್ನು ಪಾರದರ್ಶಕವಾಗಿ ಆನ್‌ಲೈನ್ ಮೂಲಕ ಪಾವತಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಇಲಾಖೆಯ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಗ್ರಾಮ ಪಂಚಾಯಿತಿಗಳು ತೆರಿಗೆ, ದರ ಮತ್ತು ಫೀಜುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಬೇಕು.
ತೆರಿಗೆ ವಿವರಗಳ ಬದಲಾವಣೆಗಳನ್ನು ಒಳಗೊಂಡ ಶಾಶ್ವತ ಸೂಚನಾ ಫಲಕಗಳನ್ನು ಅಳವಡಿಸಬೇಕು. ಕಟ್ಟಡಗಳು ಮತ್ತು ನಿವೇಶನಗಳ ಮೇಲಿನ ತೆರಿಗೆಗಳನ್ನು ಪೂರ್ಣವಾಗಿ ಅಥವಾ ಗರಿಷ್ಠ ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶವಿದೆ.
ನಿಯಮ ಉಲ್ಲಂಘನೆಗೆ ದಂಡ:
ಗ್ರಾಮ ಪಂಚಾಯಿತಿಗಳ ಮಾದರಿ ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳಿಗೆ ಅಥವಾ ಪರಿವರ್ತನೆಯಾಗದ ಭೂಮಿ ಅಥವಾ ಅನುಮೋದಿತವಲ್ಲದ ಲೇಔಟ್‌ಗಳಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ, ಅಥವಾ ಅಧಿಭೋಗ/ಪೂರ್ಣಗೊಳಿಸಿದ ಪ್ರಮಾಣಪತ್ರವಿಲ್ಲದೆ ಸ್ವಾಧೀನಪಡಿಸಿಕೊಂಡ ಕಟ್ಟಡಗಳಿಗೆ ಮೊದಲ ವರ್ಷದಲ್ಲಿ ವಿಧಿಸುವ ತೆರಿಗೆಯು ದುಪ್ಪಟ್ಟಾಗಿರುತ್ತದೆ.
ಈ ಆಸ್ತಿಗಳ ವಿವರಗಳನ್ನು ನಮೂನೆ-11ಬಿ ರಿಜಿಸ್ಟರ್‌ನಲ್ಲಿ ನಿರ್ವಹಿಸಲಾಗುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025ರ ಅಧಿಸೂಚನೆಯ ನಂತರ ಯಾವುದೇ ಹೊಸ ಸ್ವತ್ತುಗಳನ್ನು ಈ ರಿಜಿಸ್ಟರ್‌ಗೆ ಸೇರಿಸಲಾಗುವುದಿಲ್ಲ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಕ್ಷೇಪಣೆಗಳ ಸಲ್ಲಿಸಲು ಹೀಗೆ ಮಾಡಿ :
ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 3ನೇ ಮಹಡಿ, 3ನೇ ಹಂತ, ಬಹುಮಹಡಿಗಳ ಕಟ್ಟಡ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು-01 ಇಲ್ಲಿಗೆ ಕಳುಹಿಸಲು ಕೋರಲಾಗಿದೆ. ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಸ್ವೀಕರಿಸುವ ಯಾವುದೇ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.


























