ಬೆಂಗಳೂರು, ಜು.06 www.bengaluruwire.com : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸುಮಾರು 50.05 ಕೋಟಿ ರೂಪಾಯಿ ಮೌಲ್ಯದ 8 ಎಕರೆ 0.24 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಶನಿವಾರ ಬೆಂಗಳೂರು ನಗರದ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದರು. ಗುಂಡುತೋಪು, ಗೋಮಾಳ, ಸ್ಮಶಾನ, ಜೋಗೆರಹಳ್ಳಿ ಮತ್ತು ನಾಗನಹಳ್ಳಿ ಗ್ರಾಮಗಳ ನಡುವಿನ ಕಾಲುದಾರಿ ಹಾಗೂ ಕರೆ (ಕೆರೆ) ಜಾಗಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಪ್ರಮುಖ ತೆರವು ಕಾರ್ಯಾಚರಣೆಗಳು:
* ಬೆಂಗಳೂರು ಪೂರ್ವ ತಾಲ್ಲೂಕು: ಕೆ.ಆರ್.ಪುರ ಹೋಬಳಿಯ ಕೊಡಿಗೆಹಳ್ಳಿ (ಸ.ನಂ 32)ಯಲ್ಲಿ 0.04 ಗುಂಟೆ ಗುಂಡುತೋಪು (ರೂ. 2.50 ಕೋಟಿ) ಮತ್ತು ವರ್ತೂರು ಹೋಬಳಿಯ ವಾಲೆಪುರ (ಸ.ನಂ 29)ದಲ್ಲಿ 0.20 ಗುಂಟೆ ಗೋಮಾಳ (ರೂ. 5.00 ಕೋಟಿ) ತೆರವುಗೊಂಡಿದೆ.

* ಆನೇಕಲ್ ತಾಲ್ಲೂಕು: ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿ (ಸ.ನಂ 29)ಯಲ್ಲಿ 0.01 ಗುಂಟೆ ಗೋಮಾಳ (ರೂ. 0.35 ಲಕ್ಷ) ತೆರವು.
* ಬೆಂಗಳೂರು ದಕ್ಷಿಣ ತಾಲ್ಲೂಕು: ಬೇಗೂರು ಹೋಬಳಿಯ ಪರಪ್ಪನ ಅಗ್ರಹಾರ (ಸ.ನಂ 9)ದಲ್ಲಿ 0.01 ಗುಂಟೆ ಸ್ಮಶಾನ (ರೂ. 0.45 ಲಕ್ಷ), ಉತ್ತರಹಳ್ಳಿ ಹೋಬಳಿಯ ವಾಜರಹಳ್ಳಿ (ಸ.ನಂ 44)ಯಲ್ಲಿ 0.18 ಗುಂಟೆ ಗುಂಡುತೋಪು (ರೂ. 25.00 ಕೋಟಿ) ಮತ್ತು ತಾವರೆಕೆರೆ ಹೋಬಳಿಯ ಜೋಗೆರಹಳ್ಳಿ-ನಾಗನಹಳ್ಳಿ ಗ್ರಾಮಗಳ (ಸ.ನಂ 9,10,12,21,27,25,17, 24,25,26,53,56,57) ನಡುವಿನ 0.15 ಗುಂಟೆ ಕಾಲುದಾರಿ (ರೂ. 0.45 ಲಕ್ಷ) ತೆರವುಗೊಳಿಸಲಾಗಿದೆ.
* ಬೆಂಗಳೂರು ಉತ್ತರ ತಾಲ್ಲೂಕು: ದಾಸನಪುರ ಹೋಬಳಿಯ ಬೊಮ್ಮಶೆಟ್ಟಿಹಳ್ಳಿ (ಸ.ನಂ 63)ಯಲ್ಲಿ 2 ಎಕರೆ 0.22 ಗುಂಟೆ ಗೋಮಾಳ (ರೂ. 5.10 ಕೋಟಿ), ವೆಂಕಟಾಪುರ (ಸ.ನಂ 23)ದಲ್ಲಿ 0.36 ಗುಂಟೆ ಗುಂಡುತೋಪು (ರೂ. 0.30 ಲಕ್ಷ) ಮತ್ತು ಯಶವಂತಪುರ ಹೋಬಳಿಯ ಹೊಸಹಳ್ಳಿಗೊಲ್ಲರಪಾಳ್ಯ (ಸ.ನಂ 4)ದಲ್ಲಿ 0.05 ಗುಂಟೆ ಗೋಮಾಳ (ರೂ. 0.40 ಲಕ್ಷ) ತೆರವುಗೊಂಡಿದೆ.
* ಯಲಹಂಕ ತಾಲ್ಲೂಕು: ಹೆಸರಘಟ್ಟ-2 ಹೋಬಳಿಯ ಕಾಕೋಳು (ಸ.ನಂ 44) ಗ್ರಾಮದಲ್ಲಿ 3 ಎಕರೆ 0.22 ಗುಂಟೆ ಕರೆ ಜಾಗ (ರೂ. 10.50 ಕೋಟಿ) ತೆರವು ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯಕರು ಹಾಗೂ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.





















