ಬೆಂಗಳೂರು, ಜು.05 www.bengaluruwire.com : ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಭವಿಸಿದ 5 ಹುಲಿಗಳ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಎಸಗಿದ ಡಿಸಿಎಫ್ ಚಕ್ರಪಾಣಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದಾರೆ.
ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿಯನ್ನು ಪರಿಶೀಲಿಸಿದ ಬಳಿಕ ಸಚಿವರು ಈ ಕ್ರಮ ಕೈಗೊಂಡಿದ್ದಾರೆ.
ವೇತನ ಪಾವತಿಯಲ್ಲಿ ನಿರ್ಲಕ್ಷ್ಯ:
ಡಿಸಿಎಫ್ ಚಕ್ರಪಾಣಿ ಅವರು ಹೊರಗುತ್ತಿಗೆ ಸಿಬ್ಬಂದಿಗೆ ಏಪ್ರಿಲ್ ತಿಂಗಳಲ್ಲೇ ಬಿಡುಗಡೆಯಾಗಿದ್ದ ವೇತನವನ್ನು ಜೂನ್‌ವರೆಗೂ ಪಾವತಿಸದಿರುವುದು ಗಂಭೀರ ಕರ್ತವ್ಯಲೋಪ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಕಾಲದಲ್ಲಿ ವೇತನ ಸಿಗದೆ, ಮಾರ್ಚ್‌ನಿಂದ ಮೂರು ತಿಂಗಳ ವೇತನ ಸಿಗದ ಕಾರಣ ಜೂನ್ 23ರಂದು ಪ್ರತಿಭಟನೆ ನಡೆಸಿದ್ದ ಮುಂಚೂಣಿ ಸಿಬ್ಬಂದಿ ಗಸ್ತು ಕಾರ್ಯದಿಂದ ವಿಮುಖರಾಗಲು ಇದು ಪ್ರಮುಖ ಕಾರಣವಾಗಿದೆ. ಈ ನಿರ್ಲಕ್ಷ್ಯದಿಂದಾಗಿ ಅರಣ್ಯ ರಕ್ಷಣಾ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಡಿಸಿಎಫ್ ಚಕ್ರಪಾಣಿ ಅವರ ಅಮಾನತು ಮತ್ತು ಇಲಾಖಾ ವಿಚಾರಣೆಗೆ ಸಚಿವರು ಶಿಫಾರಸು ಮಾಡಿದ್ದಾರೆ.
ರಾಸಾಯನಿಕದಿಂದ ಹುಲಿಗಳ ಸಾವು:
ಸುಮಾರು 11 ವರ್ಷದ ತಾಯಿ ಹುಲಿ ಮತ್ತು 10-11 ತಿಂಗಳ ನಾಲ್ಕು ಮರಿ ಹುಲಿಗಳ ಸಾವು, ಹುಲಿ ದಾಳಿ ಮಾಡಿ ಕೊಂದ ಹಸುವಿನ ಮೃತದೇಹದೊಳಗೆ ಸೇಡು ತೀರಿಸಿಕೊಳ್ಳಲು ಸಿಂಪಡಿಸಲಾದ ರಾಸಾಯನಿಕ ಸಂಯುಕ್ತದಿಂದ ಸಂಭವಿಸಿದೆ ಎಂದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ.
ಇತರ ಅಧಿಕಾರಿಗಳ ಮೇಲೆ ಕ್ರಮ:
ಗಸ್ತು ಸಿಬ್ಬಂದಿಯ ಕಾರ್ಯಕ್ಷಮತೆಯ ಮೇಲೆ ನಿಗಾ ಇಡುವಲ್ಲಿ ವಿಫಲರಾದ ಸಂಬಂಧಿತ ವಲಯದ ಎ.ಸಿ.ಎಫ್, ಆರ್.ಎಫ್.ಓ. ಮತ್ತು ಡಿ.ಆರ್.ಎಫ್.ಓ. ಅವರನ್ನೂ ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಲು ಸಚಿವರು ಸೂಚಿಸಿದ್ದಾರೆ. ಅರಣ್ಯ ರಕ್ಷಣೆಯ ತಮ್ಮ ಮೂಲಭೂತ ಕರ್ತವ್ಯದಲ್ಲಿ ಇವರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಶ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಈ ತಿಂಗಳ 10ರೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಅರಣ್ಯ ಸಚಿವರು ಸೂಚಿಸಿದ್ದಾರೆ.






















