ಬೆಂಗಳೂರು, ಜು.04 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯುವುದು ಇನ್ನು ಸುಲಭ ಮತ್ತು ವೇಗವಾಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ನಂಬಿಕೆ ನಕ್ಷೆ’ ಯೋಜನೆ ಈಗ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿದ್ದು, 4,000 ಚದರಡಿವರೆಗಿನ ನಿವೇಶನಗಳಿಗೆ ಒಂದೇ ದಿನದಲ್ಲಿ ತಾತ್ಕಾಲಿಕ ಕಟ್ಟಡ ನಕ್ಷೆ ಮತ್ತು 15 ದಿನಗಳಲ್ಲಿ ಅನುಮೋದಿತ ನಕ್ಷೆ ಲಭ್ಯವಾಗಲಿದೆ.
ಪ್ರಮುಖವಾಗಿ, ಕಂದಾಯ ನೌಕರರ ಪರಿಶೀಲನೆಯ ಅಗತ್ಯವಿಲ್ಲದೆ, ಇ-ಖಾತಾ ಆಧಾರದ ಮೇಲೆ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯಲಿದೆ. 2024ರ ಸೆಪ್ಟೆಂಬರ್‌ನಲ್ಲಿ ಚಾಲನೆಗೊಂಡಿದ್ದ ಈ ಯೋಜನೆ, 2025ರ ಜನವರಿವರೆಗೂ ಆಮೆಗತಿಯಲ್ಲಿ ಸಾಗಿತ್ತು. ಆದರೆ, ಜುಲೈ 3ರಿಂದ ಸಂಪೂರ್ಣ ವ್ಯವಸ್ಥೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದ್ದು, ಬಿಬಿಎಂಪಿ ಕಚೇರಿಗೆ ಅಲೆದಾಡದೆ ಕಟ್ಟಡ ನಕ್ಷೆಯನ್ನು ಪಡೆಯಬಹುದು. ಈ ಯೋಜನೆಯನ್ನು ಮತ್ತಷ್ಟು ಜನಸ್ನೇಹಿ ಮಾಡಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ನಗರ ಯೋಜನೆಯ ಹೆಚ್ಚುವರಿ ನಿರ್ದೇಶಕ ಗಿರೀಶ್ ತಿಳಿಸಿದ್ದಾರೆ.
ಇ-ಖಾತಾ ಕಡ್ಡಾಯ, ದಾಖಲೆಗಳ ರಾಶಿಗೆ ಮುಕ್ತಿ :
ಇನ್ನು ಮುಂದೆ ಕಟ್ಟಡ ನಕ್ಷೆಗೆ ಅರ್ಜಿ ಸಲ್ಲಿಸುವಾಗ ಇ-ಖಾತಾ ಕಡ್ಡಾಯವಾಗಿದೆ. ಇ-ಖಾತಾ ಇದ್ದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ, ಕ್ರಯಪತ್ರ, ಆಸ್ತಿಯ ಸ್ಥಳ (ಅಕ್ಷಾಂಶ, ರೇಖಾಂಶ), ಮಾಲೀಕರ ಚಿತ್ರ, ಆಧಾರ್‌ನಂತಹ ಇತರೆ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಈ ಎಲ್ಲ ಮಾಹಿತಿಗಳು ಇ-ಖಾತಾದಲ್ಲಿಯೇ ಲಭ್ಯವಿರುವುದರಿಂದ ಕಂದಾಯ ಅಧಿಕಾರಿಗಳ ಪರಿಶೀಲನೆಯ ಅವಶ್ಯಕತೆ ಇರುವುದಿಲ್ಲ. ಮ್ಯಾನುಯಲ್ ಖಾತಾ ಹೊಂದಿರುವವರಿಗೆ ಕಟ್ಟಡ ನಕ್ಷೆ ನೀಡುವುದನ್ನು ನಿಲ್ಲಿಸಲಾಗಿದೆ.

ಸ್ವಯಂಚಾಲಿತ ಅನುಮೋದನೆ ವ್ಯವಸ್ಥೆ (ಡೀಮ್ಡ್ ಅಪೂವಲ್) :
‘ನಂಬಿಕೆ ನಕ್ಷೆ’ ಯೋಜನೆಯಡಿ, ನಿಗದಿತ 15 ದಿನಗಳ ಕಾಲಮಿತಿಯೊಳಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮೋದನೆ ನೀಡದಿದ್ದರೆ, ಕಟ್ಟಡ ನಕ್ಷೆ ಸ್ವಯಂಚಾಲಿತವಾಗಿ ಅನುಮೋದನೆಗೊಂಡಂತೆ (ಡೀಮ್ಡ್) ಪರಿಗಣಿಸಲಾಗುತ್ತದೆ. ಈ ಮೂಲಕ ಅಧಿಕಾರಿಗಳ ವಿಳಂಬಕ್ಕೆ ಕಡಿವಾಣ ಹಾಕಲಾಗಿದೆ ಎಂದು ಗಿರೀಶ್ ತಿಳಿಸಿದರು.
ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? :
- ಅರ್ಜಿ ಸಲ್ಲಿಕೆ: ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಆರ್ಕಿಟೆಕ್ಟ್‌ಗಳು ಅಥವಾ ಎಂಜಿನಿಯರ್‌ಗಳು ಮಾಲೀಕರು ಒದಗಿಸುವ ದಾಖಲೆ ಮತ್ತು ಕಟ್ಟಡ ನಕ್ಷೆಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (https://bpas.bbmpgov.in/BPAMSClient4/Default.aspx?TAV-1) ಅಪ್‌ಲೋಡ್ ಮಾಡಬೇಕು.
* ಬಫರ್ ಝೋನ್ ಪರಿಶೀಲನೆ: ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಆನ್‌ಲೈನ್‌ನಲ್ಲೇ ಪರಿಶೀಲಿಸಿ, ಕಟ್ಟಡವು ಕೆರೆ ಅಥವಾ ಸರ್ಕಾರಿ ಪ್ರದೇಶಗಳ ಯಾವುದೇ ಬಫರ್ ಝೋನ್‌ನಲ್ಲಿ ಬರುವುದಿಲ್ಲ ಎಂಬುದನ್ನು ದೃಢೀಕರಿಸುತ್ತದೆ. ಅರ್ಜಿದಾರರ ಬಫರ್ ಪರಿಶೀಲನೆಯನ್ನು ಬಿಬಿಎಂಪಿ ನಗರ ಯೋಜನೆ ಬಿ-ಪಾಸ್‌ನೊಂದಿಗೆ ಸಂಯೋಜಿಸಲಾಗಿದೆ.
* ತಾತ್ಕಾಲಿಕ ನಕ್ಷೆ: ಆಟೊ ಡಿಸಿಆರ್ (Auto DCR) ಮೂಲಕ ವರದಿ ಸಿದ್ಧಗೊಂಡು, ತಾತ್ಕಾಲಿಕ ನಕ್ಷೆಯನ್ನು ಒಂದೇ ದಿನದಲ್ಲಿ ನೀಡಲಾಗುತ್ತದೆ. ಬಿ-ಪಾಸ್ ತಂತ್ರಾಂಶದಲ್ಲೇ ಡ್ರಾಯಿಂಗ್ ಪರಿಶೀಲನೆಯನ್ನು ಆಟೋಕ್ಯಾಡ್ ಎಂಜಿನ್ ಮೂಲಕ ಮಾಡಲಾಗುತ್ತದೆ.
*ಸ್ವತ್ತಿನ ಗೈಡೆನ್ಸ್ ವ್ಯಾಲ್ಯೂ ಅಪ್‌ಲೋಡ್ ಮಾಡಬೇಕು : ಸ್ಟ್ಯಾಂಪ್ಸ್ & ರಿಜಿಸ್ಟ್ರೇಷನ್ ವಿಭಾಗವು ಜಿಪಿಎಸ್ ಆಧಾರಿತ ಗೈಡೆನ್ಸ್ ವ್ಯಾಲ್ಯೂ ಸಿದ್ಧಪಡಿಸುತ್ತಿದ್ದು, ಒಮ್ಮೆ ಆ ವ್ಯವಸ್ಥೆ ಸಿದ್ದವಾದರೆ ನಂತರ ಸ್ವತ್ತು ಮಾಲೀಕರು ಸ್ವತಃ ಗೈಡೆನ್ಸ್ ವ್ಯಾಲ್ಯೂ ಅಪ್‌ಲೋಡ್ ಮಾಡುವ ಅವಶ್ಯಕತೆಯಿರುವುದಿಲ್ಲ. ಆದರೆ ಸದ್ಯ ಸ್ವತ್ತಿನ ಮಾರ್ಗಸೂಚಿ ದರವನ್ನು ಬಿ-ಪಾಸ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವಾಗ ವಿವರ ನೀಡಬೇಕು. ಇದರಿಂದ ಕಟ್ಟಡ ನಕ್ಷೆ ನೀಡಲು ಶುಲ್ಕ ಲೆಕ್ಕಾಚಾರ ಮಾಡಿ ಪಾವತಿಸುವುದು ಸುಲಭವಾಗಲಿದೆ. ಶುಲ್ಕ ಪಾವತಿಸಿದ ನಂತರ ಡ್ರಾಫ್ಟ್ ನಕ್ಷೆ ಒಂದೇ ದಿನದಲ್ಲಿ ಲಭ್ಯವಾಗಲಿದೆ.
* ಅನುಮೋದಿತ ನಕ್ಷೆ: ನಂತರ ನಗರ ಯೋಜನೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನಕ್ಷೆ ಮಂಜೂರು ಮಾಡುತ್ತಾರೆ. ದಾಖಲೆಗಳಲ್ಲಿ ಯಾವುದೇ ಸಮಸ್ಯೆ ಅಥವಾ ತಪ್ಪಿದ್ದರೆ, ಬಿಬಿಎಂಪಿ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಂಡು ‘ತಾತ್ಕಾಲಿಕ ನಕ್ಷೆ’ಯನ್ನು ರದ್ದುಗೊಳಿಸಿ ಕಟ್ಟಡ ನಿರ್ಮಿಸದಂತೆ ನಿರ್ಬಂಧಿಸಲಾಗುತ್ತದೆ.
* ಸಂಪೂರ್ಣ ಆನ್‌ಲೈನ್: 15 ದಿನಗಳಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿಯಲಿದ್ದು, ಪ್ರತಿಯೊಂದು ಅನುಮೋದನೆಯನ್ನೂ ಆನ್‌ಲೈನ್‌ನಲ್ಲೇ ನಡೆಸಲು ಅಧಿಕಾರಿಗಳಿಗೆ ಲಾಗಿನ್ ನೀಡಲಾಗಿದೆ.
‘ನಂಬಿಕೆ ನಕ್ಷೆ’ ಯೋಜನೆಯಡಿ 7,000 ಅನುಮೋದಿತ ನಕ್ಷೆ ನೀಡಿಕೆ :
ಇಲ್ಲಿಯವರೆಗೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 7,000 ಸ್ವತ್ತುಗಳಿಗೆ ‘ನಂಬಿಕೆ ನಕ್ಷೆ’ ಯೋಜನೆಯಡಿ ಕಟ್ಟಡ ನಕ್ಷೆ ನೀಡಲಾಗಿದೆ. ಅಂತಿಮವಾಗಿ, ಎಲ್ಲಾ ದಾಖಲೆಗಳನ್ನು ಎಡಿಟಿಪಿ (ADTP- Assistant Director Town Planning) ಪರಿಶೀಲಿಸುತ್ತಾರೆ. ಒಟ್ಟು 15 ದಿನಗಳಲ್ಲಿ ಅನುಮೋದಿತ ನಕ್ಷೆ ಲಭ್ಯವಾಗಲಿದೆ. ಈ ಮೂಲಕ, ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರು ಎದುರಿಸುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ.






















