ಬೆಂಗಳೂರು, ಜು.02 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ನೂತನ ತಂತ್ರಾಂಶ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಸಾರ್ವಜನಿಕ ಸ್ನೇಹಿ ಈ ವ್ಯವಸ್ಥೆಯ ಮೂಲಕ ಮನವಿ, ಕೋರಿಕೆ ಹಾಗೂ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ.
ದೂರು ಸಲ್ಲಿಕೆ ಹೇಗೆ? :
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಲ್ಲಿಸಲು ಮೂರು ವಿಧಾನಗಳನ್ನು ಬಳಸಬಹುದಾಗಿದೆ:
* ಆನ್‌ಲೈನ್: ಸಾರ್ವಜನಿಕರ ಕುಂದುಕೊರತೆ ನಿವಾರಣಾ ವ್ಯವಸ್ಥೆ (iPGRS Web App) ಮೂಲಕ.

* ದೂರವಾಣಿ: ನಾಗರಿಕ ಸಹಾಯ ಕೇಂದ್ರದ 9483166622 ಸಂಖ್ಯೆಗೆ ಕರೆ ಮಾಡುವ ಮೂಲಕ.
* ನೇರ ಭೇಟಿ: ಪ್ರಾಧಿಕಾರಕ್ಕೆ ಖುದ್ದಾಗಿ ಭೇಟಿ ನೀಡಿ ದೂರು ಸಲ್ಲಿಸಬಹುದು.
30 ದಿನಗಳ ಗಡುವು :
ಸಲ್ಲಿಕೆಯಾದ ಮನವಿಗಳು, ಕೋರಿಕೆಗಳು ಅಥವಾ ದೂರುಗಳನ್ನು ನಿಯಮಾನುಸಾರ ಪರಿಶೀಲಿಸಿ 30 ದಿನಗಳೊಳಗೆ ಪರಿಹಾರ ಒದಗಿಸಲಾಗುವುದು. ಒಂದು ವೇಳೆ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ, ಸೂಕ್ತ ಹಿಂಬರಹ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಬಿಡಿಎ ತಿಳಿಸಿದೆ.
ತೃಪ್ತಿ ಆಗದಿದ್ದಲ್ಲಿ ಸಭೆ :
ಸಂಬಂಧಪಟ್ಟ ಅಧಿಕಾರಿಗಳು 30 ದಿನಗಳಲ್ಲಿ ಕೈಗೊಂಡಿರುವ ಕ್ರಮ ಸಾರ್ವಜನಿಕರಿಗೆ ತೃಪ್ತಿದಾಯಕವಾಗಿಲ್ಲದಿದ್ದರೆ, ಅಂತಹ ಪ್ರಕರಣಗಳನ್ನು ಪ್ರತಿ ಗುರುವಾರ ಮಧ್ಯಾಹ್ನ ವಲಯವಾರು ಸಾರ್ವಜನಿಕರ ಸಮ್ಮುಖದಲ್ಲಿ ಪರಿಶೀಲಿಸಲಾಗುವುದು. ಈ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಾನೂನು ರೀತ್ಯಾ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನೂತನ ವ್ಯವಸ್ಥೆಯು ಸಾರ್ವಜನಿಕರಿಗೆ ಬಿಡಿಎ ದೊಂದಿಗೆ ವ್ಯವಹರಿಸುವಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ.






















