ಬೆಂಗಳೂರು, ಜು.1 www.bengaluruwire.com : ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಹಾಗೂ ಸುಟ್ಟಗಾಯಗಳ ಬ್ಲಾಕೀನ (MBCC) ಸೆಮಿನಾರ್ ಕೊಠಡಿಯಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ, ಸ್ವಿಚ್ ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಈ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸಮಯದಲ್ಲಿ ವಾರ್ಡ್‌ನಲ್ಲಿ ಒಟ್ಟು 26 ರೋಗಿಗಳು (14 ಪುರುಷರು, 5 ಮಹಿಳೆಯರು ಮತ್ತು 7 ಮಕ್ಕಳು) ಇದ್ದರು. ಇವರಲ್ಲಿ 5 ಮಂದಿ ಐಸಿಯುನಲ್ಲಿದ್ದರು.
ಬೆಂಕಿಯಿಂದ ಹೊರಹೊಮ್ಮಿದ ಹೊಗೆ ಮತ್ತು ಮುಂಜಾಗ್ರತಾ ಕ್ರಮವಾಗಿ, ಬರ್ನ್ಸ್ ವಾರ್ಡ್‌ನಲ್ಲಿದ್ದ ಎಲ್ಲಾ 26 ರೋಗಿಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಎಚ್ ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ.

ಘಟನಾ ಸ್ಥಳಕ್ಕೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್, ವಿಭಾಗದ ಮುಖ್ಯಸ್ಥ ಡಾ. ಯೋಗೇಶ್ವರಪ್ಪ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕಿ ಡಾ. ಸ್ಮಿತಾ ಭೇಟಿ ನೀಡಿ ಪರಿಶೀಲಿಸಿದರು.

“ಎಲ್ಲಾ ರೋಗಿಗಳು, ರೋಗಿಗಳ ಸಂಬಂಧಿಕರು, ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ” ಎಂದು ಡಾ. ರಮೇಶ್ ಕೃಷ್ಣ ತಿಳಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಖಚಿತಪಡಿಸಿದೆ.






















