ಸುಬ್ರಹ್ಮಣ್ಯ, ಜು.1 www.bengaluruwire.com : ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ, ದೇವಳದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಮಾಸ್ಟರ್ ಪ್ಲಾನ್‌ಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ, ಸಚಿವರು ದೇವಸ್ಥಾನದ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಗುತ್ತಿಗೆದಾರರಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಕುಕ್ಕೆಯಲ್ಲಿನ ಪ್ರಮುಖ ಅಭಿವೃದ್ಧಿ ಯೋಜನೆಗಳು:
* ಆಶ್ಲೇಷ ಬಲಿ ಪೂಜಾ ಮಂದಿರ ನಿರ್ಮಾಣ: ದೇವಳದ ತುಳಸಿ ತೋಟದಲ್ಲಿ 4.62 ಕೋಟಿ ರೂ. ವೆಚ್ಚದಲ್ಲಿ ಆಶ್ಲೇಷ ಬಲಿ ಪೂಜಾ ಮಂದಿರ ನಿರ್ಮಿಸಲು ಅನುಮೋದನೆ ನೀಡಲಾಗಿದ್ದು, ಮಾಜಿ ಮುಜರಾಯಿ ಸಚಿವ ಶ್ರೀ ಕೃಷ್ಣಯ್ಯ ಸೆಟ್ಟಿ ಅವರ ಅಳಿಯ ಶ್ರೀ ಜೈ ಪುನೀತ್ ಅವರು ಸೇವಾ ರೂಪದಲ್ಲಿ ಇದನ್ನು ನಿರ್ಮಿಸಲಿದ್ದಾರೆ.

* ಸುತ್ತು ಪೌಳಿ ನಿರ್ಮಾಣ: ಶಾಸ್ತ್ರೋಕ್ತವಾಗಿ ಮತ್ತು ಸುದೃಢವಾಗಿ ಸುತ್ತು ಪೌಳಿ ನಿರ್ಮಿಸಲು ಸೂಚನೆ ನೀಡಲಾಗಿದೆ.
* ಅನ್ನದಾಸೋಹ ಭವನ: ರಥ ಬೀದಿಯ ಬಲಭಾಗದಲ್ಲಿ 5000 ಭಕ್ತರಿಗೆ ನಿರಂತರ ಅನ್ನದಾಸೋಹ ನೀಡುವ ಸುಸಜ್ಜಿತ ಭವನ ನಿರ್ಮಿಸಲು ಸಮ್ಮತಿ ನೀಡಲಾಗಿದೆ.
* ಸರ್ಪ ಸಂಸ್ಕಾರ ಯಾಗ ಶಾಲೆಗಳು: ಪ್ರತ್ಯೇಕ ಸರ್ಪ ಸಂಸ್ಕಾರ ಸೇವೆಗಾಗಿ ಹಾಲಿ ಇರುವ ಆದಿ ಸುಬ್ರಹ್ಮಣ್ಯದ ಸಾಮೂಹಿಕ ಯಾಗ ಶಾಲೆಯ ಬಳಿ 20 ಪ್ರತ್ಯೇಕ ಯಾಗ ಶಾಲೆಗಳನ್ನು ನಿರ್ಮಿಸಲು ಹಾಗೂ ಹೆಚ್ಚುವರಿ ಸರ್ಪ ಸಂಸ್ಕಾರಗಳಿಗಾಗಿ ಯೋಜನೆ ರೂಪಿಸಲು ಸೂಚಿಸಲಾಗಿದೆ.
* ವಸತಿ ಗೃಹಗಳ ನಿರ್ಮಾಣ: ಭಕ್ತಾದಿಗಳ ಅನುಕೂಲಕ್ಕಾಗಿ ಇಂಜಾಡಿ ತೋಟದಲ್ಲಿ 896 ಕೊಠಡಿಗಳ ನಾಲ್ಕು ಬ್ಲಾಕ್ ಕಟ್ಟಡ ಸಮುಚ್ಚಯ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದರ ಅಂದಾಜು ವೆಚ್ಚ 230.50 ಕೋಟಿ ರೂ.. ಸಮೂಹ ಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಮತ್ತು ಶಾಲಾ ಮಕ್ಕಳಿಗೆ 20 ರಿಂದ 50 ಜನ ಉಳಿದುಕೊಳ್ಳುವ ಹಾಲ್ ಮಾದರಿಯ ಡಾರ್ಮಿಟರಿ ವಸತಿಗೃಹ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ.
* ಶೌಚಾಲಯ ಸಂಕೀರ್ಣಗಳು: ದೇವಳದ ವ್ಯಾಪ್ತಿಯಲ್ಲಿ ನಾಲ್ಕು ಕಡೆ 24 ಶೌಚಾಲಯ, 12 ಸ್ನಾನಗೃಹ ಮತ್ತು 4 ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಒಳಗೊಂಡ ಸಂಕೀರ್ಣಗಳನ್ನು ನಿರ್ಮಿಸಲಾಗುವುದು.
* ತ್ಯಾಜ್ಯ ವಿಲೇವಾರಿ ಘಟಕ: ಪರಿಸರ ಮಾಲಿನ್ಯ ತಡೆಗಟ್ಟಲು ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಮ್ಮತಿ ನೀಡಲಾಗಿದೆ.
* ವಾಣಿಜ್ಯ ಸಂಕೀರ್ಣ ಮತ್ತು ವಸತಿಗೃಹ: ರಥ ಬೀದಿಯ ಎಡಭಾಗದಲ್ಲಿ ವಾಣಿಜ್ಯ ಸಂಕೀರ್ಣ, ಪಾರ್ಕಿಂಗ್ ವ್ಯವಸ್ಥೆ ಮತ್ತು ಎಕ್ಸಿಕ್ಯೂಟಿವ್ ಸೂಟ್ ರೂಮ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.
* ಪಾರಂಪರಿಕ ರಥ ಬೀದಿ: ದೇವಳದ ಮುಂಭಾಗದಲ್ಲಿ ಪಾರಂಪರಿಕ ರಥ ಬೀದಿ, ಗ್ಯಾಲರಿ, ರಂಗಮಂದಿರ, ವೈದ್ಯಕೀಯ ಸೌಲಭ್ಯ, ಪೊಲೀಸ್ ಭದ್ರತಾ ಕೊಠಡಿ, ಅಂಗಡಿ ಮಳಿಗೆಗಳು, ಮ್ಯೂಸಿಯಂ, ಆಡಿಯೋ-ವಿಡಿಯೋ ಕೊಠಡಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಅಳವಡಿಸಲಾಗುವುದು.
* ಸೇತುವೆ ಮತ್ತು ಬೈಪಾಸ್ ರಸ್ತೆ: ಪೂರ್ವ ದ್ವಾರದಲ್ಲಿ ಸೇತುವೆ ನಿರ್ಮಾಣ, ಸಂಚಾರ ದಟ್ಟಣೆ ಕಡಿಮೆ ಮಾಡಲು ಎಡೋಳಿ ಆರಂಪಾಡಿ ಬೈಪಾಸ್ ರಸ್ತೆ ನಿರ್ಮಾಣ, ಹಾಲಿ ಇರುವ ವಸತಿಗೃಹಗಳ ನವೀಕರಣ ಮತ್ತು ಕೊಳಚೆ ನೀರು ಶುದ್ಧೀಕರಣ ಘಟಕ ಮೇಲ್ದರ್ಜೆಗೇರಿಸಲು ಸೂಚನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಆಯುಕ್ತರಾದ ವೆಂಕಟೇಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.






















