ಬೆಂಗಳೂರು, ಜೂ.01 www.bengaluruwire.com : ಮಾರ್ಚ್ 2025 ರ ಇತ್ತೀಚಿನ ಮಾಹಿತಿ ಪ್ರಕಾರ ದೇಶದ ಪ್ರಮುಖ ಮಾಧ್ಯಮಗಳ ಮೌಲ್ಯವು 2.51 ಟ್ರಿಲಿಯನ್ (30 ಬಿಲಿಯನ್ ಯುಎಸ್ ಡಾಲರ್) ಆಗಿದೆ. ಮಾಧ್ಯಮವು ಕೇವಲ ಪತ್ರಿಕೋದ್ಯಮವಾಗಿಲ್ಲ, ಕಾರ್ಪೊರೇಷನ್ ಗಳಂತಾಗಿದೆ. ಇಲ್ಲಿ ಆದಾಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆಯೇ ವಿನಃ ನಿಜವಾದ ಪತ್ರಿಕೋದ್ಯಮಕ್ಕೆ ಕೇವಲ ಸ್ವಲ್ಪ ಜಾಗ ನೀಡಲಾಗಿದೆ ಎಂದು ಮ್ಯಾಗಸ್ಸೆ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತರು ಪಿ. ಸಾಯಿನಾಥ್ ವಿಶ್ಲೇಷಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವಾರ್ತಾಸೌಧದಲ್ಲಿ ಏರ್ಪಡಿಸಿದ್ದ “ಪತ್ರಿಕಾ ದಿನಾಚರಣೆ – 2025” ಕಾರ್ಯಕ್ರಮದಲ್ಲಿ ವಾಸ್ತವ ಸುದ್ದಿಗಾಗಿ ಸಮರ (The Battle for Factual Reporting) ವಿಷಯ ಕುರಿತು ಪ್ರಧಾನ ಭಾಷಣ ಮಾಡಿದರು.
ಕಳೆದ ಮೂರು ದಶಕದಲ್ಲಿ ತಾಂತ್ರಿಕೇತರ ಬದಲಾವಣೆಯಾಗಿವೆ. ದೊಡ್ಡ ಮಾಧ್ಯಮ ಉದ್ಯಮಿಗಳು ಪ್ರಭಾವಿ ರಾಜಕಾರಣಿಗಳೊಂದಿಗೆ ನೆಂಟಸ್ತಿಕೆ ಬೆಳಸಿದ್ದಾರೆ. ಭಾರತದಲ್ಲಿನ 211 ಮಂದಿ ಬಿಲಿಯನರ್ಸ್ ಗಳ ಆಸ್ತಿಯು ದೇಶದ ಒಟ್ಟು ಜಿಡಿಪಿಯ ಶೇ.25ರಷ್ಟು ಪಾಲನ್ನು ಹೊಂದಿದ್ದಾರೆ. ಇದೇ ಪ್ರಭಾವಿಗಳು ಬಹುತೇಕ ಮಾಧ್ಯಮಗಳ ಒಡೆತನವನ್ನು ಹೊಂದಿದ್ದಾರೆ. ಮಾಧ್ಯಮಗಳು ಶ್ರೀಮಂತರಾದಷ್ಟು ನೈಜ ಸುದ್ದಿಗಳು ಹೊರಗೆ ಬರುವ ಸಾಧ್ಯತೆ ಕಡಿಮೆ ಎಂದು ಅವರು ವಾಸ್ತವವನ್ನು ತೆರೆದಿಟ್ಟರು. ಅಲ್ಲದೆ ಮಾಧ್ಯಮ ಕ್ಷೇತ್ರದಲ್ಲಿ ಏಕಸ್ವಾಮ್ಯತೆಯು ಅಳಿಯಬೇಕಿದೆ ಎಂದು ಪಿ.ಸಾಯಿನಾಥ್ ಅಭಿಪ್ರಾಯಪಟ್ಟರು.
ನಿಜವಾದ ಪತ್ರಕರ್ತರು ಆಳುವ ಸರ್ಕಾರವನ್ನು ಪ್ರಶ್ನಿಸುತ್ತಾ ಸತ್ಯವನ್ನು ಹೊರಗೆಳೆಯಲು ನಿರಂತರವಾಗಿ ಪ್ರಯತ್ನಿಸಬೇಕು. ಈಗಿನ ಪತ್ರಿಕೋದ್ಯಮ ಎಂಬುದು ಎರಡು ರೀತಿಯಲ್ಲಿದೆ. ಒಂದು ನಿಜವಾದ ಪತ್ರಕರ್ತ, ಮತ್ತೊಂದು ವರ್ಗ ಸ್ಟೆನೊಗ್ರಾಫರ್ ರೀತಿಯಾಗಿದ್ದೆ. 2019ರ ಕೋವಿಡ್ ನಂತರ ಪತ್ರಿಕಾ, ಟಿವಿ ಸಂಸ್ಥೆಗಳು 4000 ಪತ್ರಕರ್ತರನ್ನು ಕೆಲಸದಿಂದ ತೆಗೆದು ಹಾಕಿವೆ.

ಟಿವಿ ಮಾಧ್ಯಮದಲ್ಲಿ ಆಂಕರ್ ಸಾಕಷ್ಟು ಪವರ್ ಫುಲ್ ಅಂದುಕೊಂಡಿದ್ದೇವೆ. ಎಲ್ಲಿಯವರೆಗೆ ಪ್ರಭಾವಿ ಸ್ಥಾನದ ಆಳುವವರ ಜೊತೆಗೆ ಇರುವಷ್ಟು ದಿನ ಮಾತ್ರ ಆ ಆಂಕರ್ ಗಳು ಪ್ರಭಾವಿಗಳಾಗಿರುತ್ತಾರೆ. ಆದರೆ ಕೆಲವರನ್ನು ಹೊರತುಪಡಿಸಿ ಎಂದು ಅವರು ತಿಳಿಸಿದರು.

ಯುದ್ದದ ಬಲಿಪಶುಗಳ ರೀತಿ ಭಾರತದಲ್ಲಿ ಮಾಧ್ಯಮ ಬಲಿಪಶುಗಳ ಸೃಷ್ಟಿ :
ಕನ್ನಡ ಭಾಷೆಯನ್ನು 20-30 ವರ್ಷಗಳಲ್ಲಿ ಮಾಧ್ಯಮಗಳು ಭಾಷಾ ಮಾಲಿನ್ಯ ಮಾಡಿವೆ. ಪತ್ರಕರ್ತರು ತಮ್ಮ ಪತ್ರಿಕೆ, ಟಿವಿಗಳಲ್ಲಿ ಭಾಷಾ ಬಳಕೆಯ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ. ಯುದ್ದದ ಬಲಿಪಶುಗಳ ರೀತಿ ಭಾರತದಲ್ಲಿ ಮಾಧ್ಯಮಗಳು ಸ್ವತಃ ಬಲಿಪಶುಗಳಾಗುತ್ತಾ ಸಾಮಾನ್ಯರನ್ನು ಮಾಧ್ಯಮ ಬಲಿಪಶುಗಳನ್ನು ಸೃಷ್ಟಿಸುತ್ತಿದೆ. ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಮಾಧ್ಯಮದಲ್ಲಿ ಫ್ಯಾಕ್ಟ್ ಚೆಕ್ ವಿಭಾಗ ತೆರೆದಿರುವುದು ಮಾಧ್ಯಮದ ಅಧಃಪತನವನ್ನು ಸೂಚಿಸುತ್ತಿದೆ. ಹಿಂಸೆಯನ್ನು ಟಿವಿ ಮಾಧ್ಯಮಗಳು ಸಾಮಾನ್ಯೀಕರಿಸುತ್ತಿರುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಬೇಸರ ವ್ಯಕ್ತಪಡಿಸಿದರು.
ಕೊಲೆಗಡುಕ ಭಾಷೆಯ ಬದಲಿಗೆ ಮಾನವೀಯ ಭಾಷೆ ಬಳಸಬೇಕಿದೆ :
“ನಿಜ ಸುದ್ದಿಗಾಗಿ ಸಮರ” ಕುರಿತು ಪ್ರಧಾನ ಭಾಷಣ ಮಾಡುತ್ತಾ, ಟಿವಿ ಮಾಧ್ಯಮದವರು ಭಾಷೆಯನ್ನು ಹಿಂಸೆಗಾಗಿ, ಅಶ್ಲೀಶತೆಗಾಗಿ ಬಳಸುತ್ತಿರುವ ಕ್ರಮವನ್ನು ಭಾಷೆಯ ಮೇಲಿನ ಕ್ರೌರ್ಯತೆಯಾಗಿದೆ. ಟಿವಿ ನಿರೂಪಕರು ಕಿರಿಚುವಿಕೆ, ಆಂಘೀಕತೆ, ಅವತಾರಗಳೆಲ್ಲವುದರ ಬಗ್ಗೆ ನನ್ನ ತಕರಾರಿದೆ. ಸುದ್ದಿ ಮನೆಯಲ್ಲಿ ಕೊಲೆಗಡುಕ ಭಾಷೆಯನ್ನು ಬಳಸಲಾಗುತ್ತಿದೆ. ದಮನಿತರ ಪರವಾಗಿ ಧ್ವನಿ ಎತ್ತುವುದು, ಸತ್ಯವನ್ನು ಹೊರಗಿಡುವುದು ನಿಜವಾದ ಪತ್ರಿಕೋದ್ಯಮವಾಗಿದೆ. ಮಾನವೀಯ ಭಾಷೆ ಬಳಸಬೇಕಿದೆ. ಈ ಮೂಲಕ ಮಾನವೀಯ ಸಮಾಜ ನಿರ್ಮಾಣವಾಗಬೇಕಿದೆ ಎಂದರು.
ನಿಜ ಸುದ್ದಿ ಇದೆ ಎಂದಾದರೆ ಸುಳ್ಳು ಸುದ್ದಿಯಿದೆ ಎಂದರ್ಥ :
ಈ ದೇಶ, ರಾಜ್ಯದಲ್ಲಿ ಅಧಿಕಾರದಲ್ಲಿರುವವರ ಪರ ಮಾಧ್ಯಮ ಮಾತನಾಡಬಾರದು. ಜನಪರವಾಗಿ ಸುದ್ದಿಯನ್ನು ಮಾಡಬೇಕಿದೆ. ಇಂದಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ನಿಜ ಸುದ್ದಿಗಾಗಿ ಸಮರ’ ವಿಷಯ ಪ್ರಸ್ತುತವಾಗಿದೆ. ನಿಜ ಸುದ್ದಿ ಇದೆ ಎಂದಾದರೆ ಸುಳ್ಳು ಸುದ್ದಿಯಿದೆ ಎಂಬುದಿದೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಹೇಳಿದಂತೆ ಪಾವತಿ ಸುದ್ದಿ ಮಾಡಬಾರದು. ಹೀಗಾಗಿಯೇ ನಮ್ಮ ಸರ್ಕಾರ, ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನು ಪ್ರಕಾರ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಸೂಚಿಸಿದ್ದೇನೆ. ಊಹೆ ಸುದ್ದಿಗಳು ಇತ್ತೀಚೆಗೆ ಜಾಸ್ತಿಯಾಗಿದೆ. ನಿರ್ಭೀತಿ ಪತ್ರಿಕೋದ್ಯಮ ಕಡಿಮೆಯಾಗಿದೆ. ತನಿಖಾ ಪತ್ರಿಕೋದ್ಯಮ ಬೆಳೆಯಲಿ. ಮಾಧ್ಯಮಗಳು ಸಮಾಜದ ಕೆಲಸ ಮಾಡಲು ಇರುವುದು. ಏಕೆಂದರೆ ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕೆನೆಯ ಅಂಗವಾಗಿದೆ ಎಂದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮ ಸ್ವಾತಂತ್ರ್ಯ ಅತ್ಯಗತ್ಯವಾಗಿದೆ. ಡಿವಿ ಮಾಧ್ಯಮಗಳು ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದೆ. “ಹಿಂದೆ ಒಮ್ಮೆ ನನ್ನ ಕಾರಿನ ಮೇಲೆ ಕಾಗೆ ಕೂತಾಗ, ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವರೇ? ಬಜೆಟ್ ಮಂಡಿಸಿದ ಕೂಡಲೇ ಅಧಿಕಾರ ಕಳೆದುಕೊಳ್ಳುತ್ತಾರೆಂದೆಲ್ಲಾ ಟಿವಿಯಲ್ಲಿ ಪ್ರತ್ಯೇಕ ಚರ್ಚೆ ನಡೆದಿತ್ತು. ಅದಾದ ಬಳಿಕವೂ ನಾನು ಸಿಎಂ ಆಗಿ ಅಧಿಕಾರದಲ್ಲಿದ್ದೆ” ಎಂದು ಸ್ಮರಿಸಿದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆಯಂತಹ ಇತರ ಜನಪರ ಕಾರ್ಯಕ್ರಮ, ಯೋಜನೆಯನ್ನು ನೀಡೋಣ. ಆದರೆ ಸುಳ್ಳು ಸುದ್ದಿ ಮಾಡಬೇಡಿ, ಬೇರೆಯವರನ್ನು ತೇಜೋವಧೆ ಮಾಡಬೇಡಿ ಎಂದು ಪರ್ತಕರ್ತರಿಗೆ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಅಧ್ಯಕ್ಷ ಶಿವಾನಂದ ತಗಡೂರ್ ಮಾತನಾಡಿ, ರಾಜ್ಯದ ಪತ್ರಕರ್ತರ ಮೂರು ದಶಕಗಳ ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸುವಂತೆ ನಡೆಸಿದ ಹೋರಾಟಕ್ಕೆ ಫಲ ನೀಡಿದೆ. ಹಲವು ಮುಖ್ಯಮಂತ್ರಿಗಳು ಇಂತಹ ಯೋಜನೆ ಜಾರಿಗೆ ತರುವ ಬಗ್ಗೆ ಭರವಸೆ ನೀಡಿದ್ದರೇ ವಿನಃ ಈಡೇರಿಸಿರಲಿಲ್ಲ. ಸಿಎಂ ಸಿದ್ದರಾಮಯ್ಯನವರು ನುಡಿದಂತೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಾನ್ಯತೆ ಪಡೆದ ರಾಜ್ಯ ಪತ್ರಕರ್ತರು ಹಾಗೂ ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ವೈದ್ಯಕೀಯ ವಿಮೆಯನ್ನು ಜಾರಿಗೆ ತಂದಿರುವುದಕ್ಕೆ ಸಿಎಂ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಕಳೆದ ವರ್ಷದಿಂದೀಚೆಗೆ ನಿರಂತರವಾಗಿ ಯುವ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಜಾಗೃತಿ ಮೂಡಿಸಲು ಹಲವು ವಿಚಾರಸಂಕಿರಣ, ಚರ್ಚೆ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರವೂ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಮಸೂದೆಯನ್ನು ಸಿದ್ದಪಡಿಸುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಮ್ ತಿಳಿಸಿದರು.
ಪತ್ರಿಕಾ ದಿನಾಚರಣೆ-2025 ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಬಸ್ ಪಾಸ್ ವಿತರಣೆ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಮತ್ತು ಆಯ್ದ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿಯಿಂದ ಮಾ ಮೊಜೋ ಕಿಟ್ (Mobile Journalism Kit) ಅನ್ನು ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗಣ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ವರದಿ ಮಾಧ್ಯಮ ಗ್ಯಾಲರಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.






















