ಬೆಂಗಳೂರು, ಜೂ.30 www.bengaluruwire.com : ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಆವರಣದಲ್ಲಿ ₹14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಹೊಸ ದುರಸ್ತಿ ಘಟಕವು 20 ಮೆಗಾವ್ಯಾಟ್ ಸಾಮರ್ಥ್ಯದವರೆಗಿನ ಪರಿವರ್ತಕಗಳನ್ನು ದುರಸ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ.
ಶಂಕುಸ್ಥಾಪನೆ ಬಳಿಕ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, “ಆರು ತಿಂಗಳಲ್ಲಿ ಈ ಘಟಕದ ಕಾಮಗಾರಿ ಪೂರ್ಣಗೊಂಡು ದುರಸ್ತಿ ಕಾರ್ಯ ಆರಂಭಿಸಲಾಗುವುದು. ಇದು ಸರ್ಕಾರಿ ಕಾರ್ಖಾನೆಯಾಗಿರುವುದರಿಂದ, ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ ವ್ಯಾಪ್ತಿಯ ಪರಿವರ್ತಕಗಳನ್ನು ಇಲ್ಲಿಯೇ ದುರಸ್ತಿ ಮಾಡಲಾಗುವುದು,” ಎಂದು ತಿಳಿಸಿದರು.
ಕವಿಕಾದ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ :
ಪ್ರಸ್ತುತ ಕವಿಕಾ ವಾರ್ಷಿಕ 2,500 ವಿದ್ಯುತ್ ಪರಿವರ್ತಕಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದ್ದರೂ, ಅಷ್ಟು ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ ಎಂದು ಸಚಿವರು ಗಮನ ಸೆಳೆದರು.

“ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಅಗತ್ಯ ಕೆಲಸದ ಬಂಡವಾಳವನ್ನು (ವರ್ಕಿಂಗ್ ಕ್ಯಾಪಿಟಲ್) ಎಸ್ಕಾಂಗಳು ಮತ್ತು ಬ್ಯಾಂಕ್ ಮೂಲಕ ಒದಗಿಸಲಾಗುವುದು. ಕಾಲಮಿತಿಯಲ್ಲಿ ವಾರ್ಷಿಕ 2,500 ವಿದ್ಯುತ್ ಪರಿವರ್ತಕಗಳನ್ನು ಉತ್ಪಾದಿಸುವುದರ ಜೊತೆಗೆ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದರು.
ಕವಿಕಾಗೆ ಎಸ್ಕಾಂಗಳಿಂದ ₹50 ಕೋಟಿ ಕೆಲಸದ ಬಂಡವಾಳ ಪೂರೈಸುವಂತೆ ಸೂಚಿಸಲಾಗಿದ್ದು, ಬೆಸ್ಕಾಂ ವತಿಯಿಂದ ಈಗಾಗಲೇ ₹12.50 ಕೋಟಿ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಶೀಘ್ರ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ತ್ವರಿತ ದುರಸ್ತಿ ಸೇವೆಗೆ ಒತ್ತು :
ಕವಿಕಾ ವ್ಯವಸ್ಥಾಪಕ ನಿರ್ದೇಶಕ ಲೋಖಂಡೆ ಸ್ನೇಹಲ್ ಸುಧಾಕರ್ ಮಾತನಾಡಿ, “ಕವಿಕಾದಲ್ಲೇ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರ ಆರಂಭಿಸುವುದರಿಂದ ದುರಸ್ತಿ ಕೆಲಸ ತ್ವರಿತವಾಗಿ ನಡೆದು ಎಸ್ಕಾಂಗಳು ಮತ್ತು ಕೆಪಿಟಿಸಿಎಲ್‍ಗಳಿಗೆ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಈ ದುರಸ್ತಿ ಕೇಂದ್ರದಲ್ಲಿ ಪರಿವರ್ತಕಗಳ ಉತ್ಪಾದನೆಯನ್ನೂ ಮಾಡಲಾಗುವುದು,” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕವಿಕಾ ಅಧ್ಯಕ್ಷ ಎಚ್.ಸಿ.ಲಲಿತ್ ರಾಘವ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಕವಿಕಾ ಕಾರ್ಯನಿರ್ವಾಹಕ ನಿರ್ದೇಶಕ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.






















