ಮಂಡ್ಯ, ಜೂ.30 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯಕ್ಕೆ ಬಾಗಿನ ಅರ್ಪಿಸಿ, ರಾಜ್ಯದ ನೀರಾವರಿ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದರು. ಇದೇ ವೇಳೆ, ವಿರೋಧ ಪಕ್ಷಗಳ ಟೀಕೆಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.
ಸಿ.ಎಂ ಸಿದ್ದರಾಮಯ್ಯ ಅವರ ಮಾತುಗಳು:
ಸೋತ ಗಿರಾಕಿಗಳು ನಮ್ಮ ಸರ್ಕಾರ ಬಿದ್ದು ಹೋಗುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಐದು ವರ್ಷಗಳ ಕಾಲ ಬಂಡೆ ರೀತಿ ಗಟ್ಟಿಯಾಗಿ ನಿಲ್ಲುತ್ತದೆ, 2028ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. “ನೀರಾವರಿಗೆ ನಮ್ಮ ಸರ್ಕಾರ ₹25,000 ಕೋಟಿ ನೀಡಿದೆ, ಬೇರೆ ಯಾವ ಸರ್ಕಾರವಾದರೂ ಇಷ್ಟು ಅನುದಾನ ನೀಡಿತ್ತಾ?” ಎಂದು ಪ್ರಶ್ನಿಸಿದರು. ಅಲ್ಲದೆ, ಬಿಜೆಪಿ ಮತ್ತು ಜೆಡಿಎಸ್‌ಗಳು ಜನರನ್ನು ದಡ್ಡರೆಂದು ಭಾವಿಸಬಾರದು, ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.
ಕೃಷಿ ಪ್ರಗತಿಗಾಗಿ ರೈತರಿಗೆ ವಾರ್ಷಿಕ ₹19,000 ಕೋಟಿ ಪಂಪ್‌ಸೆಟ್ ಸಬ್ಸಿಡಿ ನೀಡುತ್ತಿರುವುದನ್ನು ಉಲ್ಲೇಖಿಸಿದರು. 92 ವರ್ಷಗಳ ಬಳಿಕ ಜೂನ್ ತಿಂಗಳಲ್ಲೇ ಕೆಆರ್‌ಎಸ್ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, “ನಮ್ಮ ಸರ್ಕಾರದ ಕಾಲುಗುಣ ಸರಿಯಿಲ್ಲ ಎಂದಿದ್ದ ವಿರೋಧ ಪಕ್ಷಗಳು ಈಗ ಏನು ಹೇಳುತ್ತವೆ?” ಎಂದು ಅಣಕಿಸಿದರು. ತಕ್ಷಣವೇ ಎಲ್ಲಾ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸುವಂತೆ ವೇದಿಕೆಯಿಂದಲೇ ಆದೇಶ ನೀಡಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು:
“ಕಾವೇರಿ ಜಲಾನಯನ ಪ್ರದೇಶಕ್ಕೆ ₹2,000 ಕೋಟಿಗೂ ಹೆಚ್ಚು ಹಾಗೂ ಮಂಡ್ಯ ಜಿಲ್ಲೆಗೆ ₹1,000 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾವೇರಿ ಆರತಿಗೆ ವಿರೋಧ ಮಾಡದಂತೆ, ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

“ನೀರಿಗೆ ಜಾತಿ, ಧರ್ಮವಿಲ್ಲ. ನೀರನ್ನು ಪೂಜಿಸುವುದು ನಮ್ಮ ಸಂಸ್ಕೃತಿ. ಕಾವೇರಿ ಆರತಿಯಿಂದ ಸ್ಥಳೀಯರಿಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ” ಎಂದು ಹೇಳಿದರು. ಬೃಂದಾವನ ಉದ್ಯಾನವನ್ನು ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದ ಅವರು, ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಸನ್ನದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
“ಮೈಸೂರು ರಾಜಮಾತೆ ತಮ್ಮ ಒಡವೆಗಳನ್ನು ಅಡವಿಟ್ಟು ಈ ಅಣೆಕಟ್ಟು ನಿರ್ಮಿಸಲು ಮುನ್ನುಡಿ ಬರೆದರು. ಕಾವೇರಿ ನಮ್ಮೆಲ್ಲರ ಜೀವಧಾರೆ” ಎಂದು ಕವನ ವಾಚಿಸಿ, ಕಾವೇರಿ ಮಹತ್ವವನ್ನು ಸ್ಮರಿಸಿದರು.
ಸಚಿವರಾದ ಚಲುವರಾಯಸ್ವಾಮಿ, ಎಚ್ ಸಿ ಮಹದೇವಪ್ಪ, ವೆಂಕಟೇಶ್, ಬೋಸರಾಜ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ರವಿ ಗಣಿಗ, ಉದಯ್, ಹರೀಶ್ ಗೌಡ, ರವಿಶಂಕರ್, ಎ ಆರ್ ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ಎಂಎಲ್ಸಿಗಳಾದ ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ತಮ್ಮಯ್ಯ ಮತ್ತಿತರರು ಭಾಗವಹಿಸಿದ್ದರು.






















