ಬೆಂಗಳೂರು, ಜೂ.27 www.bengaluruwire.com : ಕರ್ನಾಟಕದ ಹೆಮ್ಮೆಯ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್)ದ ನಂದಿನಿ ಬ್ರ್ಯಾಂಡ್, ಪ್ರತಿಷ್ಠಿತ ಬ್ರ್ಯಾಂಡ್ ಫೈನಾನ್ಸ್ 2025ರ ಜಾಗತಿಕ ರ್‍ಯಾಂಕಿಂಗ್‌ನಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಕಳೆದ ವರ್ಷ 43ನೇ ಸ್ಥಾನದಲ್ಲಿದ್ದ ನಂದಿನಿ, ಈ ಬಾರಿ 38ನೇ ಸ್ಥಾನಕ್ಕೆ ಜಿಗಿದು ದೇಶದ ಅಗ್ರ 40 ಅತ್ಯಂತ ಮೌಲ್ಯಯುತ ಭಾರತೀಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಲಂಡನ್ ಮೂಲದ ಪ್ರಮುಖ ಬ್ರ್ಯಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾದ ಬ್ರ್ಯಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ನಂದಿನಿ ಬ್ರ್ಯಾಂಡ್‌ನ ಮೌಲ್ಯವು ಕಳೆದ ವರ್ಷಕ್ಕಿಂತ $139 ಮಿಲಿಯನ್ ಹೆಚ್ಚಳವಾಗಿದ್ದು, ಒಟ್ಟು $1,079 ಮಿಲಿಯನ್ (₹9,226 ಕೋಟಿ)ಗೆ ತಲುಪಿದೆ.
ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಸ್ಥಿರ ಸ್ಥಾನ :
ಆಹಾರ ಮತ್ತು ಪಾನೀಯ ವಿಭಾಗದಲ್ಲಿ ನಂದಿನಿ ತನ್ನ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ವಿಭಾಗದಲ್ಲಿ ಅಮೂಲ್ (1ನೇ ಸ್ಥಾನ), ಮದರ್ ಡೈರಿ-ಎನ್‌ಡಿಡಿಬಿ (2ನೇ ಸ್ಥಾನ) ಮತ್ತು ಬ್ರಿಟಾನಿಯಾ (3ನೇ ಸ್ಥಾನ)ದಂತಹ ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ನಂದಿನಿ ಹೆಮ್ಮೆಯಿಂದ ನಿಂತಿದೆ. ಡಾಬರ್ ಈ ವಿಭಾಗದಲ್ಲಿ 5ನೇ ಸ್ಥಾನದಲ್ಲಿದೆ.

ಬ್ರ್ಯಾಂಡ್ ಮೌಲ್ಯ ರ್‍ಯಾಂಕಿಂಗ್ ಎನ್ನುವುದು ಬ್ರ್ಯಾಂಡ್‌ನ ಆರ್ಥಿಕ ಮೌಲ್ಯವನ್ನು ಸಮಗ್ರವಾಗಿ ಅಳೆಯುವ ಪಟ್ಟಿಯಾಗಿದೆ. ಇದು ಬ್ರ್ಯಾಂಡ್‌ನ ಸಾಮರ್ಥ್ಯ, ಗ್ರಾಹಕರ ನಿಷ್ಠೆ, ಮಾರುಕಟ್ಟೆ ಪಾಲು ಮತ್ತು ಒಟ್ಟಾರೆ ಬ್ರ್ಯಾಂಡ್ ಇಕ್ವಿಟಿಯಂತಹ ಅಂಶಗಳನ್ನು ಒಳಗೊಂಡಿರುತ್ತದೆ. ಉತ್ತಮ ರ್‍ಯಾಂಕಿಂಗ್ ಬಲವಾದ ಬ್ರ್ಯಾಂಡ್ ಗ್ರಹಿಕೆ, ಸ್ಥಿರ ಕಾರ್ಯಕ್ಷಮತೆ ಮತ್ತು ಗಟ್ಟಿಯಾದ ಮಾರುಕಟ್ಟೆ ಅಸ್ತಿತ್ವವನ್ನು ಸೂಚಿಸುತ್ತದೆ.
ನಂದಿನಿ ಬ್ರ್ಯಾಂಡ್‌ನ ನಿರಂತರ ಕಾರ್ಯಕ್ಷಮತೆ ಮತ್ತು ಮೌಲ್ಯದಲ್ಲಿನ ಬೆಳವಣಿಗೆಯು ದಕ್ಷಿಣ ಭಾರತದಾದ್ಯಂತ ಮತ್ತು ಅದರಾಚೆಗಿನ ಗ್ರಾಹಕರಲ್ಲಿ ಅದು ಗಳಿಸಿರುವ ಹೆಚ್ಚುತ್ತಿರುವ ಬ್ರ್ಯಾಂಡ್ ಇಕ್ವಿಟಿ ಮತ್ತು ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಇದು ನಂದಿನಿ ಬ್ರ್ಯಾಂಡ್‌ನ ನಿರಂತರ ಬೆಳವಣಿಗೆ ಮತ್ತು ಗ್ರಾಹಕರ ವಿಶ್ವಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ಸಂತಸ :
ಈ ಸಾಧನೆ ಕುರಿತು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ನಮ್ಮ ಅಮೂಲ್ಯ ಗ್ರಾಹಕರಿಗೆ, ಸಮರ್ಪಿತ ರೈತರಿಗೆ, ವಿಶ್ವಾಸಾರ್ಹ ಪಾಲುದಾರರಿಗೆ ಮತ್ತು ಬದ್ಧ ತಂಡಗಳಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ನಿಮ್ಮ ನಿರಂತರ ವಿಶ್ವಾಸ ಮತ್ತು ಅಚಲ ಬೆಂಬಲವು ನಂದಿನಿ ಬ್ರ್ಯಾಂಡ್‌ನ ಬೆಳವಣಿಗೆ ಮತ್ತು ಮನ್ನಣೆಗೆ ಪ್ರಮುಖ ಶಕ್ತಿಯಾಗಿದೆ” ಎಂದು ಅವರು ಹೇಳಿದರು.
“ಪ್ರತಿದಿನವೂ ಮೌಲ್ಯ, ಪೋಷಣೆ ಮತ್ತು ವಿಶ್ವಾಸಾರ್ಹತೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ. ನಂದಿನಿಯ ಪರಂಪರೆಯನ್ನು ಬಲಪಡಿಸಲು ಮತ್ತು ಹೊಸ ಮೈಲಿಗಲ್ಲುಗಳನ್ನು ತಲುಪಲು ನಾವೆಲ್ಲರೂ ಒಟ್ಟಾಗಿ ಸಾಗುತ್ತೇವೆ” ಎಂದು ಶಿವಸ್ವಾಮಿ ಅವರು ತಿಳಿಸಿದ್ದಾರೆ.






















