ಬೆಂಗಳೂರು, ಜೂ.27 www.bengaluruwire.com : ರೋಬೋಟ್ ನೆರವಿನಿಂದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ದಾನಿಯಿಂದ ಪಡೆದ ಮೂತ್ರಪಿಂಡವನ್ನು ಏಕಕಾಲದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ‘TREAT’ (Total Robot Enabled And Assisted Transplant) ಎಂಬ ನೂತನ ತಂತ್ರಜ್ಞಾನವನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಪರಿಚಯಿಸಿದೆ. ಏಕಕಾಲದಲ್ಲಿ ದಾನಿಯಿಂದ ಕಿಡ್ನಿ ಪಡೆದು, ಅದೇ ಸಮಯದಲ್ಲಿ ರೋಗಿಗೆ ಕಸಿ ಮಾಡುವ ದೇಶದ ಮೊದಲ ರೋಬೋಟ್ ನೆರವಿನ ಈ ಪ್ರಯತ್ನ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಫೋರ್ಟಿಸ್ ಆಸ್ಪತ್ರೆಯ ಮೂತ್ರಪಿಂಡ ವಿಜ್ಞಾನದ ಪ್ರಧಾನ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಟ್ರೀಟ್ ತಂತ್ರಜ್ಞಾನವು ಕಿಡ್ನಿ ಕಸಿಯನ್ನು ಅತ್ಯಂತ ಸುಲಭ ಮತ್ತು ನಿಖರವಾಗಿಸಿದೆ. ಎರಡು ರೋಬೋಟ್‌ಗಳ ನೆರವಿನಿಂದ ನಡೆಯುವ ಈ ಶಸ್ತ್ರಚಿಕಿತ್ಸೆಯು ಸಂಪೂರ್ಣ ಯಶಸ್ಸು ನೀಡುತ್ತದೆ. ಇದು ಚೇತರಿಕೆಯ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ದಾನಿಗಳಿಗೂ ಶೀಘ್ರ ಚೇತರಿಕೆಗೆ ಸಹಕಾರಿಯಾಗಿದೆ” ಎಂದು ವಿವರಿಸಿದರು.
“ಮಧುಮೇಹದಿಂದ ಮೂತ್ರಪಿಂಡ ವೈಫಲ್ಯಕ್ಕೊಳಗಾಗಿದ್ದ ತಾಂಜಾನಿಯಾದ 47 ವರ್ಷದ ಜೊವಾಕಿಮ್ ಅವರ ಪ್ರಕರಣವನ್ನು ವಿವರಿಸಿದರು. ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದಿಂದಾಗಿ ಇತರ ಆಸ್ಪತ್ರೆಗಳು ಕಸಿಗೆ ನಿರಾಕರಿಸಿದ್ದರೂ, ಫೋರ್ಟಿಸ್‌ನಲ್ಲಿ ರೋಬೋಟ್ ನೆರವಿನ ಕಸಿಗೆ ಒಳಗಾದ ನಂತರ, ಅವರು ಅಲ್ಪಾವಧಿಯಲ್ಲಿ ಚೇತರಿಸಿಕೊಂಡರು. ದಾನಿ ಸಹೋದರ ಕೂಡ ಶೀಘ್ರವೇ ಗುಣಮುಖರಾದರು’ ಎಂದು ವೈದ್ಯರು ಹೇಳಿದರು.

ಇದೇ ರೀತಿ, ವಿಜಯಪುರದ 35 ವರ್ಷದ ಸನಾ ಎಂಬುವರು ಮತ್ತು ಅವರ ದಾನಿ ಸಹೋದರ ಚಂದ್ ಕೂಡ ಟ್ರೀಟ್ ತಂತ್ರಜ್ಞಾನದ ಮೂಲಕ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಒಂದು ವಾರದೊಳಗೆ ಇಬ್ಬರೂ ಚೇತರಿಕೆ ಕಂಡಿದ್ದಾರೆ. ಈ ತಂತ್ರಜ್ಞಾನವು ದಾನಿಗಳಲ್ಲಿ ವಿಶ್ವಾಸ ಹೆಚ್ಚಿಸುವುದಲ್ಲದೆ, ಚೇತರಿಕೆಯ ಅವಧಿಯನ್ನು ಕಡಿತಗೊಳಿಸುತ್ತದೆ ಎಂದು ಡಾ.ಕೇಶವಮೂರ್ತಿ ತಿಳಿಸಿದರು.






















