ಬೆಂಗಳೂರು, ಜೂ.27 www.bengaluruwire.com : ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕೇಂದ್ರ ಸರ್ಕಾರದ ಪಿಎಂ-ಉಷಾ ಯೋಜನೆಯಡಿ ನಡೆಯುತ್ತಿರುವ ಶೈಕ್ಷಣಿಕ ಮತ್ತು ಸಂಶೋಧನಾ ಭವನಗಳ ನಿರ್ಮಾಣಕ್ಕಾಗಿ ಮರಗಳ ತೆರವಿಗೆ ಪರಿಸರವಾದಿಗಳಿಂದ ವ್ಯಕ್ತವಾಗಿರುವ ವಿರೋಧಕ್ಕೆ ಸಂಬಂಧಿಸಿದಂತೆ, ವಿಶ್ವವಿದ್ಯಾಲಯವು ಸ್ಪಷ್ಟನೆ ನೀಡಿದೆ.
ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕುಲಪತಿ ಡಾ.ಎಸ್.ಎಂ.ಜಯಕರ್, ನಿರ್ಮಾಣ ಸ್ಥಳವು ಜೈವಿಕ ಉದ್ಯಾನವನ ಅಥವಾ ಪರಿಸರ ಸೂಕ್ಷ್ಮ ಪ್ರದೇಶದಲ್ಲಿಲ್ಲ ಎಂದು ತಿಳಿಸಿದ್ದಾರೆ.
ಯೋಜನೆಗಾಗಿ ಗುರುತಿಸಲಾಗಿರುವ 419 ಮರಗಳಲ್ಲಿ ಬಹುತೇಕ ನೀಲಗಿರಿ ಮತ್ತು ಅಕೇಶಿಯಾ ಜಾತಿಯ ಮರಗಳಾಗಿದ್ದು, ಇವು ಅಪರೂಪದ ಅಥವಾ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲ ಎಂದು ಕುಲಪತಿಗಳು ಸ್ಪಷ್ಟಪಡಿಸಿದ್ದಾರೆ. ಒಟ್ಟು 282 ಮರಗಳನ್ನು ಮಾತ್ರ ತೆರವುಗೊಳಿಸಲಾಗುವುದು. ಉಳಿದ 137 ಮರಗಳು ‘ಬಫರ್ ಝೋನ್’ನಲ್ಲಿ ಉಳಿಯಲಿವೆ. ಅಲ್ಲದೆ, ಸಣ್ಣ ಮರಗಳನ್ನು ಸಮೀಪದಲ್ಲೇ ಸ್ಥಳಾಂತರಿಸಲಾಗುವುದು ಎಂದರು.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ, 1976ರ ಪ್ರಕಾರ, ಒಂದು ಮರಕ್ಕೆ ಹತ್ತು ಸಸಿಗಳನ್ನು ನೆಡುವ ನಿಯಮವನ್ನು ವಿಶ್ವವಿದ್ಯಾಲಯವು ಪಾಲಿಸುತ್ತಿದೆ. 1998ರಿಂದ ಈವರೆಗೆ ಕ್ಯಾಂಪಸ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಸುಮಾರು 300 ಪ್ರಭೇದಗಳ ಮರಗಳು ಇಲ್ಲಿವೆ. 2017-2022ರ ಅವಧಿಯಲ್ಲಿ 1.6 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ : Save Biopark | ಜ್ಞಾನಭಾರತಿ ಬಯೋಪಾರ್ಕ್ ಉಳಿವಿಗಾಗಿ ಹೋರಾಟ: ಪರಿಸರ ನಾಶದ ವಿರುದ್ಧ ಸಾರ್ವಜನಿಕ ಆಕ್ರೋಶ

ಪಿಎಂ-ಉಷಾ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಅನುದಾನ ಘೋಷಿಸಲಾಗಿದ್ದು, ಇದರಲ್ಲಿ ₹58 ಕೋಟಿ ಅಂದಾಜು ವೆಚ್ಚದಲ್ಲಿ ಶೈಕ್ಷಣಿಕ ಭವನ (1,07,376 ಚ.ಅಡಿ) ಮತ್ತು ಸಂಶೋಧನಾ ಭವನ (16,163 ಚ.ಅಡಿ) ನಿರ್ಮಿಸಲಾಗುತ್ತಿದೆ. ಆಧುನಿಕ ಶಿಕ್ಷಣ ಮತ್ತು ಸಂಶೋಧನೆಗೆ ಪೂರಕವಾದ ಸೌಲಭ್ಯಗಳನ್ನು ಈ ಭವನಗಳು ಒದಗಿಸಲಿವೆ. ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಿ, ಯೋಜನೆಯಡಿ ₹8 ಕೋಟಿಗಳನ್ನು ಮೀಸಲಿಡಲಾಗಿದೆ ಎಂದು ಕುಲಪತಿಗಳು ತಿಳಿಸಿದರು.
ಈ ಅನುದಾನವನ್ನು ಎಲ್ಇಡಿ ಲೈಟಿಂಗ್, ಪಾದಚಾರಿ ಮಾರ್ಗಗಳ ನವೀಕರಣ, ವಿದ್ಯುತ್ ವಾಹನಗಳ ಉತ್ತೇಜನ, ಜಿಯೋಪಾರ್ಕ್ ಮತ್ತು ಔಷಧೀಯ ಸಸ್ಯ ವಲಯಗಳ ಪುನರುಜ್ಜೀವನ, ಮಳೆನೀರು ಸಂಗ್ರಹಣಾ ವ್ಯವಸ್ಥೆ ಹಾಗೂ ನೈಸರ್ಗಿಕ ವೈವಿಧ್ಯ ಕೇಂದ್ರ ಸ್ಥಾಪನೆಗೆ ಬಳಸಲಾಗುವುದು. ವಿಶ್ವವಿದ್ಯಾಲಯವು ಈಗಾಗಲೇ 7 ಚೆಕ್ ಡ್ಯಾಂಗಳನ್ನು ನಿರ್ಮಿಸಿದೆ.
ಜ್ಞಾನಭಾರತಿ ಕ್ಯಾಂಪಸ್ 1,200 ಎಕರೆ ವಿಸ್ತೀರ್ಣ ಹೊಂದಿದ್ದು, ಹೆಚ್ಚಿನ ಭಾಗ ಹಸಿರಿನಿಂದ ಕೂಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿ ಮತ್ತು ಪರಿಸರ ಸಮತೋಲನ ಕಾಯ್ದುಕೊಂಡು ಅಭಿವೃದ್ಧಿ ಸಾಧಿಸುವುದು ವಿಶ್ವವಿದ್ಯಾಲಯದ ಬದ್ಧತೆಯಾಗಿದೆ ಎಂದು ಡಾ.ಜಯಕರ್ ಪುನರುಚ್ಚರಿಸಿದರು.






















