ಬೆಂಗಳೂರು, ಜೂ.25 www.bengaluruwire.com : ಪೊಲೀಸ್ ಸಬ್ ಇನ್ ಸ್ಪೆಕ್ಟರ್ (ಪಿಎಸ್) ಹುದ್ದೆಗೆ ಪರೀಕ್ಷೆ ಬರೆದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ರಾಜ್ಯ ಪೊಲೀಸ್ ಇಲಾಖೆ ಬಿಗ್ ರಿಲೀಫ್ ನೀಡಿದೆ. ಬಹು ನಿರೀಕ್ಷಿತ 545 ಪಿಎಸ್ಐ ಹುದ್ದೆಗಳ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜೂ.23ರಂದು ಪ್ರಕಟಿಸಲಾಗಿದೆ.
2021ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿದ್ದ ಅಕ್ರಮಗಳ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಿ, ಇದೀಗ ಹೊಸದಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಸಾವಿರಾರು ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಹಿನ್ನೆಲೆ ಮತ್ತು ಮರುಪರೀಕ್ಷೆ:
2021ರ ಅಕ್ಟೋಬರ್ 3ರಂದು ನಡೆದಿದ್ದ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮಗಳು ಬೆಳಕಿಗೆ ಬಂದಿದ್ದವು. ಈ ಹಗರಣವು ರಾಜ್ಯಾದ್ಯಂತ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಗಿತ್ತು. ಹಗರಣದ ತನಿಖೆ ನಂತರ ಸರ್ಕಾರವು ಈ ಪರೀಕ್ಷೆಯನ್ನು ರದ್ದುಪಡಿಸಿ, ನ್ಯಾಯಾಲಯದ ಆದೇಶದ ಮೇರೆಗೆ 2024ರ ಜನವರಿ 23 ರಂದು ಮರುಪರೀಕ್ಷೆ ನಡೆಸಿತ್ತು. ಈ ಮರುಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಪ್ರಸ್ತುತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.


ಆಯ್ಕೆಪಟ್ಟಿ ಷರತ್ತುಗಳು:
ಪ್ರಕಟಗೊಂಡಿರುವ ಈ ಆಯ್ಕೆಪಟ್ಟಿ ಅಂತಿಮವಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇದು ಕೆಲವು ಷರತ್ತುಗಳಿಗೆ ಒಳಪಟ್ಟಿದ್ದು, ಪ್ರಮುಖವಾಗಿ ವೈದ್ಯಕೀಯ ಪರೀಕ್ಷೆ ಮತ್ತು ನ್ಯಾಯಾಲಯಗಳಲ್ಲಿನ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆ. ವೈದ್ಯಕೀಯ ಮಂಡಳಿಯು ನಡೆಸುವ ವೈದ್ಯಕೀಯ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮಾತ್ರ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳುತ್ತದೆ.
ಅಲ್ಲದೆ, ಈ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಇರುವುದು ಅಭ್ಯರ್ಥಿಗಳಿಗೆ ಯಾವುದೇ ಕಾನೂನುಬದ್ಧ ನೇಮಕಾತಿ ಹಕ್ಕನ್ನು ನೀಡುವುದಿಲ್ಲ ಎಂದು ಸಹ ಸ್ಪಷ್ಟಪಡಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಯಾವುದೇ ಪ್ರಕರಣಗಳ ಅಂತಿಮ ತೀರ್ಪಿಗೆ ಈ ಆಯ್ಕೆ ಅಂತಿಮವಾಗಿ ಒಳಪಟ್ಟಿರುತ್ತದೆ ಎಂದು ಷರತ್ತುಗಳಲ್ಲಿ ತಿಳಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ https://arc21.ksp-recruitment.in/ ನಲ್ಲಿ ಪಡೆಯಬಹುದಾಗಿದೆ.






















