ಬೆಂಗಳೂರು, ಜೂ.24 www.bengaluruwire.com : ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಕೆಂಗೇರಿಯಲ್ಲಿರುವ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಸಾಹಿತಿ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಪ್ರೊ. ದೊಡ್ಡ ರಂಗೇಗೌಡರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ವೆಚ್ಚ ಭರಿಸಲು ನಿರ್ಧರಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಮಂಗಳವಾರ ದೊಡ್ಡರಂಗೇಗೌಡರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.
ಆಸ್ಪತ್ರೆಯ ವೈದ್ಯರಲ್ಲಿ ದೊಡ್ಡ ರಂಗೇಗೌಡರ ಆರೋಗ್ಯ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಚಿವ ಶಿವರಾಜ ತಂಗಡಗಿ ಅವರು ಮುಖ್ಯಮಂತ್ರಿಗಳ ಆದೇಶದ ಅನುಸಾರ ಅವರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರದಿಂದಲೇ ಭರಿಸುವುದಾಗಿ ತಿಳಿಸಿದರು. ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು ಸೂಚಿಸಿದರು.
ಪ್ರೊ.ದೊಡ್ಡ ರಂಗೇಗೌಡರ ಕುಟುಂಬ ಸದಸ್ಯರನ್ನು ಸಹ ಭೇಟಿ ಮಾಡಿದ ಸಚಿವ ಶಿವರಾಜ ತಂಗಡಗಿ ಅವರಿಗೆ ಧೈರ್ಯ ಹೇಳಿದರು. ಪ್ರೊ.ದೊಡ್ಡರಂಗೇಗೌಡರು ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ. ಅವರ ಬಗ್ಗೆ ಅಪಾರವಾದ ಕಾಳಜಿ ಇದೆ. ಸರ್ಕಾರದಿಂದ ಅವರಿಗೆ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಸಚಿವರು ತಿಳಿಸಿದರು.























