ಮಂಡ್ಯ, ಜೂ.22 www.bengaluruwire.com : ರಾಜ್ಯ ಸರ್ಕಾರದ ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಸಚಿವ ಹೆಚ್.ಕೆ. ಪಾಟೀಲ್ ಬರೆದ ಪತ್ರವನ್ನು “ತೇಲಿ ಬಿಡಲಾಗಿದೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ
ವಸತಿ ಇಲಾಖೆಯಲ್ಲಿ ಹಣ ಪಡೆದು ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ಆರೋಪಿಸಿರುವ ಆಡಿಯೋ ಎಲ್ಲರೂ ಕೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. “ವಸತಿ ಇಲಾಖೆಯ ಬಗ್ಗೆ ಕೇಳಿಬಂದಿರುವ ಈ ಆರೋಪದ ಬಗ್ಗೆ ನನಗೇನೂ ಅಚ್ಚರಿ ಆಗಿಲ್ಲ. ಪಾಟೀಲ್ ಅವರ ಆರೋಪಗಳ ಬಗ್ಗೆಯೂ ನನಗೆ ಅಚ್ಚರಿ ಆಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ,” ಎಂದು ಅವರು ಕುಟುಕಿದರು.

ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಹಣ ಬಿಡುಗಡೆ ಮಾಡಲು ಆಡಳಿತ ಪಕ್ಷದ ಶಾಸಕರು ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು ಹಣ ಕೊಡಬೇಕಾಗಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. “ಕೆಲ ಶಾಸಕರು ನಿಮ್ಮದೊಂದು ಲೆಟರ್ ಕೊಡಿ ಸರ್, ದುಡ್ಡು ತಗೊಂಡು ಬರ್ತೀವಿ ಅಂತಾರೆ. ಹೆಸರಿಗೆ ಶಾಸಕರ ಪಾತ್ರವಷ್ಟೇ. ಮಿಕ್ಕಿದ್ದೆಲ್ಲವನ್ನೂ ಮಧ್ಯವರ್ತಿಗಳು ನೋಡಿಕೊಳ್ಳುತ್ತಾರೆ. ಇದು ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಅತ್ಯಂತ ಕೆಟ್ಟ ವ್ಯವಸ್ಥೆಯಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮನೆ ಎಂಬುದು ಬಡವರ ಕನಸು, ಆದರೆ ವಸತಿ ಇಲಾಖೆಯಲ್ಲೇ ಬಡವರಿಂದ ಸುಲಿಗೆ ಮಾಡಲಾಗುತ್ತಿದೆ ಎಂದು ದೂರಿದರು. ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ, ಸಚಿವರೇ “ರೇಟ್ ಫಿಕ್ಸ್” ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದರು.
ಎತ್ತಿನಹೊಳೆ, ಸುರಂಗ ಮಾರ್ಗ ಯೋಜನೆಗಳ ಬಗ್ಗೆ ಟೀಕೆ :
ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸುರಂಗ ರಸ್ತೆ ಮಾಡಲಿ ಎಂದು ಸವಾಲು ಹಾಕಿದರು. “ಯಾವ ಯಾವ ಟನಲ್ ರೋಡ್ ಮಾಡ್ತಾರೆ ಅಂತ ನೋಡೋಣ. ಅವರ ಮಾತುಗಳು ಯಾವುವು ನಿಜ ಆಗಲ್ಲ. ಅವರ ಮಾತುಗಳು ಯಾವುವು ನಿಜ ಆಗಲ್ಲ. ಈಗ 2027ಕ್ಕೆ ಎತ್ತಿನಹೊಳೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಇನ್ನೂ ಆ ನೀರು ಕಾಡುಮನೆ ಎಸ್ಟೇಟ್‌ನಿಂದ ಮುಂದೆ ಬಂದಿಲ್ಲ. ಈಗಾಗಲೇ 14ರಿಂದ 15 ಸಾವಿರ ಕೋಟಿ ಈಗಾಗಲೇ ಲೂಟಿ ಆಗಿದೆ,” ಎಂದು ಅವರು ಹೇಳಿದರು.
2013ರಲ್ಲಿ ಕಾಂಗ್ರೆಸ್ ಸರ್ಕಾರ ಗುದ್ದಲಿ ಪೂಜೆ ಮಾಡಿ ಎರಡೇ ವರ್ಷದಲ್ಲಿ ನೀರು ಕೊಡುವುದಾಗಿ ಹೇಳಿತ್ತು, ಆದರೆ 2025 ಆದರೂ ನೀರು ಬಂದಿಲ್ಲ ಎಂದು ಟೀಕಿಸಿದರು. ಎತ್ತಿನಹೊಳೆ ನೀರು ಕೊಡುತ್ತೇವೆಂದು ಹೇಳಿ ಬೆಂಗಳೂರಿನ ಕೊಳಚೆ ನೀರನ್ನು ಆ ಜಿಲ್ಲೆಗಳಿಗೆ ಬಿಟ್ಟಿದ್ದಾರೆ ಎಂದು ಆರೋಪಿಸಿ, ಇದರಿಂದ ಅಲ್ಲಿನ ರೈತರು ಬೆಳೆಯುವ ತರಕಾರಿಯನ್ನೂ ಯಾರು ಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ಮುಖ್ಯಮಂತ್ರಿ ಹೇಳಿಕೆ ಮತ್ತು ಮೈಶುಗರ್ ಶಾಲೆ ಬಗ್ಗೆ ಪ್ರತಿಕ್ರಿಯೆ :
2028ಕ್ಕೆ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಡಿಕೆಶಿ ಏನಿದ್ದರೂ ಕನಸು ಕಾಣಬೇಕು ಅಷ್ಟೇ. ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟು ಕೊಡ್ತಾರೆ ಎಂಬುದನ್ನು ನೋಡೋಣ,” ಎಂದರು.
ಮಂಡ್ಯದ ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಮುಖಂಡನ ವಿದ್ಯಾಸಂಸ್ಥೆಗೆ ಗುತ್ತಿಗೆಗೆ ನೀಡುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ, “ಮೈಶುಗರ್ ಸ್ಕೂಲ್‌ನ್ನು ಮಾದರಿ ಶಾಲೆ ಮಾಡಲು ನಾನು ತಯಾರಿದ್ದೇನೆ. ಇಂತಹ ಆಸ್ತಿಯನ್ನು ಗುತ್ತಿಗೆ ಮೇಲೆ ಕೊಡುವುದು ಎಂದರೆ ಹೇಗೆ? ಇದು ಹಗಲು ದರೋಡೆ ಆಗಿದೆ,” ಎಂದು ಅವರು ಹೇಳಿದರು.
ಶಾಲೆಯ ಅಭಿವೃದ್ಧಿಗೆ ₹25 ಕೋಟಿ ಬೇಕು ಎಂದಿದ್ದು, ಅಷ್ಟು ಹಣ ಕೊಡಲು ತಾನು ತಯಾರಿದ್ದೇನೆ. ಗುತ್ತಿಗೆ ನೀಡುವ ಆಲೋಚನೆ ಸರಿಯಲ್ಲ ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದರು.























