ಬೆಂಗಳೂರು, ಜೂ.21 www.bengaluruwire.com : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಗೌರವಧನವನ್ನು ತಿಂಗಳಿಗೆ ₹1,000 ಹೆಚ್ಚಳ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ರಾಜ್ಯಾದ್ಯಂತ ಸಾವಿರಾರು ಬಿಸಿಯೂಟ ಸಿಬ್ಬಂದಿಗೆ ಆರ್ಥಿಕವಾಗಿ ದೊಡ್ಡ ನೆರವು ದೊರೆತಂತಾಗಿದೆ.
ಕ್ಷೀರಭಾಗ್ಯ ಲೆಕ್ಕ ಶೀರ್ಷಿಕೆಯಡಿ ಈ ಗೌರವಧನದ ಮೊತ್ತವನ್ನು ಭರಿಸುವಂತೆ ಆದೇಶದಲ್ಲಿ ತಿಳಿಸಿದೆ. ಸರಕಾರದ ಈ ಕ್ರಮವು ಬಿಸಿಯೂಟ ತಯಾರಕರು ಹಾಗೂ ಸಹಾಯಕ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿತ್ತು. ಅವರ ಸತತ ಮನವಿಗಳು ಮತ್ತು ಹೋರಾಟಗಳ ಫಲವಾಗಿ ಗೌರವಧನ ಹೆಚ್ಚಳದ ಆದೇಶ ಈಗ ಹೊರಬಿದ್ದಿದೆ. 2025-26ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಅಡುಗೆ ಸಿಬ್ಬಂದಿಯ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.
ಇದು ಅವರ ಜೀವನಮಟ್ಟ ಸುಧಾರಿಸಲು ಮತ್ತು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ನೀಡಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಸದ್ಯ ಅಡುಗೆ ತಯಾರಕರು ₹3,700 ಮತ್ತು ಸಹಾಯಕರು ₹3,600 ಸಂಭಾವನೆ ಪಡೆಯುತ್ತಿದ್ದು, ಹೊಸದಾಗಿ ಗೌರವ ಧನ ಹೆಚ್ಚಳದಿಂದ ಇವರ ಸಂಭಾವನೆಯು ಕ್ರಮವಾಗಿ ₹4,700 ಹಾಗೂ ₹4,600ಗೆ ಏರಿಕೆಯಾಗಲಿದೆ. ಸಿಬ್ಬಂದಿ ಈ ನಿರ್ಧಾರವನ್ನು ಸಂತಸದಿಂದ ಸ್ವಾಗತಿಸಿದ್ದಾರೆ.























