ಬದುಕಿನ ಇಳಿಸಂಜೆಯಲ್ಲಿಯೂ ಪ್ರೀತಿಯ ಬಾಂಧವ್ಯ ಎಂದಿಗೂ ಕಡಿಮೆಯಾಗದು ಎಂಬುದಕ್ಕೆ ಸಾಕ್ಷಿಯಾದ ಅಪರೂಪದ ಘಟನೆಯೊಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಆಭರಣ ಮಳಿಗೆಯಲ್ಲಿ ನಡೆದಿದೆ.
ಸರಳ ಬಿಳಿ ಧೋತಿ-ಕುರ್ತಾ ಮತ್ತು ಟೋಪಿ ಧರಿಸಿದ 93 ವರ್ಷದ ವೃದ್ಧರೊಬ್ಬರು ತಮ್ಮ ಪತ್ನಿಯೊಂದಿಗೆ ಮಂಗಳಸೂತ್ರ ಖರೀದಿಸಲು ಆಭರಣ ಮಳಿಗೆಗೆ ಹೆಜ್ಜೆ ಇಟ್ಟಾಗ ಅಲ್ಲಿ ನೆರೆದಿದ್ದವರ ಕಣ್ತುಂಬಿ ಬಂತು. ಆಭರಣ ಮಳಿಗೆಯ ಸಿಬ್ಬಂದಿ ಮೊದಲಿಗೆ ಈ ವೃದ್ಧ ದಂಪತಿಯನ್ನು ಆರ್ಥಿಕ ನೆರವಿನ ಅಗತ್ಯವಿರುವವರು ಎಂದು ತಪ್ಪಾಗಿ ಭಾವಿಸಿದ್ದರು. ಆದರೆ, ವೃದ್ಧರು ತಮ್ಮ ಪತ್ನಿಗಾಗಿ ಪವಿತ್ರ ಮಂಗಳಸೂತ್ರವನ್ನು ಖರೀದಿಸಲು ಬಂದಿರುವುದಾಗಿ ಸೌಮ್ಯವಾಗಿ ಹೇಳಿದಾಗ, ಅಲ್ಲಿದ್ದವರ ಮನಸ್ಸು ಕರಗಿತು.
ಕೇವಲ 20 ರೂಪಾಯಿ ಪಡೆದ ಅಂಗಡಿ ಮಾಲೀಕ:
ಅಂಗಡಿ ಮಾಲೀಕರು ಈ ಹೃದಯಸ್ಪರ್ಶಿ ನಡೆಗೆ ಭಾವುಕರಾಗಿ ಪೂರ್ಣ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದರು. “ದಂಪತಿ ಅಂಗಡಿಗೆ ಬಂದರು ಮತ್ತು ಆ ವೃದ್ಧರು ತಮ್ಮ ಬಳಿ ಕೂಡಿಟ್ಟಿದ್ದ ₹1,120 ನೀಡಿ, ತಮ್ಮ ಪತ್ನಿಗಾಗಿ ಮಂಗಳಸೂತ್ರ ಬೇಕು ಎಂದು ಹೇಳಿದರು. ಅವರ ನಡೆ ನನ್ನನ್ನು ಆವರಿಸಿತು. ಆಶೀರ್ವಾದದ ಸಂಕೇತವಾಗಿ ಅವರಿಂದ ಕೇವಲ ₹20 ತೆಗೆದುಕೊಂಡು, ಮಂಗಳಸೂತ್ರವನ್ನು ದಂಪತಿಗೆ ಹಸ್ತಾಂತರಿಸಿದೆ” ಎಂದು ಅಂಗಡಿ ಮಾಲೀಕರು ಹೇಳಿದರು.

ಜಾಲ್ನಾ ಜಿಲ್ಲೆಯ ಅಂಭೋರಾ ಜಹಗೀರ್ ಗ್ರಾಮದ ರೈತರಾದ ನಿವೃತ್ತಿ ಶಿಂಧೆ ಮತ್ತು ಅವರ ಪತ್ನಿ ಶಾಂತಾಬಾಯಿ ಅವರೇ ಈ ಪ್ರೇಮಮಯ ದಂಪತಿ. ಈ ದಂಪತಿ ಪ್ರಸ್ತುತ ಆಷಾಢ ಏಕಾದಶಿ ಹಬ್ಬಕ್ಕಾಗಿ ಪಂಡರಪುರಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಸ್ಥಳೀಯರು ಹೇಳುವಂತೆ, ಈ ದಂಪತಿಯದು ಒಬ್ಬರನ್ನೊಬ್ಬರು ಸಾಕಷ್ಟು ಹಚ್ಚಿಕೊಂಡಿದ್ದಾರೆ ಮತ್ತು ತಮ್ಮ ವೃದ್ಧಾಪ್ಯದ ಪ್ರತಿ ಪ್ರಯಾಣದಲ್ಲೂ ಒಬ್ಬರಿಗೊಬ್ಬರು ಹೆಗಲಾಗಿ ನಿಂತು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಒಬ್ಬ ಮಗನಿದ್ದರೂ, ಈ ಇಬ್ಬರೂ ಹೆಚ್ಚಾಗಿ ಒಬ್ಬರಿಗೊಬ್ಬರು ಆಧಾರವಾಗಿದ್ದು, ಕೆಲವೊಮ್ಮೆ ಅಪರಿಚಿತರ ಮೇಲೆ ಅವಲಂಬಿತರಾಗಿದ್ದಾರೆ.
ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದಿ ಟ್ವಿಟರ್) ವ್ಯಾಪಕವಾಗಿ ಹಂಚಲ್ಪಟ್ಟಿದ್ದು, ಬಳಕೆದಾರರು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, “ಇದೇ ಭಾರತದ ಆತ್ಮ” ಎಂದು ಒಬ್ಬರು ಬರೆದರೆ, ಮತ್ತೊಬ್ಬರು “ಈ ವೃದ್ಧ ದಂಪತಿಯ ಮೇಲಿನ ಪ್ರೀತಿ ಮತ್ತು ಉದಾರತೆಗಾಗಿ ಆ ದೇವರು ಆತನನ್ನು ಆಶೀರ್ವದಿಸಲಿ. 93 ವರ್ಷದ ವೃದ್ಧರ ಆಸೆಯನ್ನು ಪೂರೈಸಿದ್ದರಿಂದ ಅವರಿಂದಲೂ ಆಶೀರ್ವಾದ ಪಡೆಯುತ್ತಾರೆ” ಎಂದು ಬರೆದಿದ್ದಾರೆ.






















