ಬೆಂಗಳೂರು, ಜೂ.19 www.bengaluruwire.com : ರಾಜ್ಯ ಸರ್ಕಾರವು ಬೆಂಗಳೂರು ಜಿಲ್ಲಾಧಿಕಾರಿ ಸೇರಿದಂತೆ ಆರು ಐಎಎಸ್ ಅಧಿಕಾರಿಗಳಿಗೆ ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆಯ ಜೊತೆಗೆ ಹೆಚ್ಚವರಿ ಜವಾಬ್ದಾರಿಯನ್ನು ನೀಡಿ ಆದೇಶಿಸಿದೆ. ಬೆಂಗಳೂರು ನಗರ, ಬಾಗಲಕೋಟೆ ಜಿಲ್ಲೆ ಹಾಗೂ ಕೃಷಿ ಇಲಾಖೆಯಲ್ಲಿ ಈ ಬದಲಾವಣೆಗಳು ಜಾರಿಗೆ ಬಂದಿವೆ.
2012ನೇ ಬ್ಯಾಚಿನ ಐಎಎಸ್ ಅಧಿಕಾರಿ ಜಗದೀಶ ಜಿ. ಪ್ರಸ್ತುತ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದು ಹೆಚ್ಚುವರಿಯಾಗಿ, ಬೆಂಗಳೂರು ನಗರ ಜಿಲ್ಲೆ ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ನೀಡಿ ಸರ್ಕಾರ ಆದೇಶಿಸಿದೆ.
2013ನೇ ಬ್ಯಾಚಿನ ಚಂದ್ರಶೇಖರ್ ನಾಯ್ಕ ಎಲ್. ಪ್ರಸ್ತುತ ವಾಣಿಜ್ಯ ತೆರಿಗೆಗಳ ಜಾರಿದಳದ ಹೆಚ್ಚುವರಿ ಆಯುಕ್ತರ ಕಾರ್ಯಭಾರದ ಜೊತೆಗೆ ಈಗ ವಾಣಿಜ್ಯ ತೆರಿಗೆಗಳ ಸೇವಾ ವಿಶ್ಲೇಷಣಾ ದಳದ ಹೆಚ್ಚುವರಿ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
2016ನೇ ಬ್ಯಾಚಿನ ಐಎಎಸ್ ಅಧಿಕಾರಿ ಸಂಗಪ್ಪಾ ಇತ್ತೀಚೆಗೆ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದು, ಬಾಗಲಕೋಟೆಯ ಪುನರ್ವಸತಿ ಮತ್ತು ಪುನರ್ ವಸತಿ ವ್ಯವಸ್ಥಾಪಕರ ಹೆಚ್ಚುವರಿ ಹುದ್ದೆಯನ್ನು ಪಡೆದಿದ್ದಾರೆ.

2018ನೇ ಬ್ಯಾಚಿನ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಬೆಂಗಳೂರಿನ ಸ್ಮಾರ್ಟ್ ಆಡಳಿತ ಕಾರ್ಯಕಾರಿ ನಿರ್ದೇಶಕ ಹುದ್ದೆಯ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (Rural Development and Panchayat Raj) ಇಲಾಖೆಯ ನಿರ್ದೇಶಕರ (e-Governance) ಹುದ್ದೆಯನ್ನು ಪ್ರಭಾರಿಯಾಗಿ ವಹಿಸಿಕೊಳ್ಳಲು ಸರ್ಕಾರ ಆದೇಶಿಸಿದೆ.
2012ನೇ ಬ್ಯಾಚಿನ ಐಎಎಸ್ ಅಧಿಕಾರಿ ಪಟೀಲ್ ಯಲಗೌಡ ಶಿವನಗೌಡ, ಕೃಷಿ ಇಲಾಖೆಯ ಆಯುಕ್ತರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಈಗ ಹೆಚ್ಚುವರಿಯಾಗಿ ಆಹಾರ ಪ್ರಕ್ರಿಯೆ ಮತ್ತು ಹಾರ್ವೆಸ್ಟ್ ತಂತ್ರಜ್ಞಾನ ವಿಭಾಗದ ವಿಶೇಷ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗಿದೆ.






















