ಬೆಂಗಳೂರು, ಜೂ.4 www.bengaluruwire.com : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಆರ್‌ಸಿಬಿ ವಿಜಯೋತ್ಸವ ಸಂಭ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳಿಂದ ನ್ಯಾಯಾಂಗ ತನಿಖೆ ನಡೆಸುವುದಾಗಿ ಆದೇಶಿಸಿದ್ದಾರೆ.
ಬುಧವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ 33 ಮಂದಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಕೆಲವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರಾಣಾಪಾಯವಿಲ್ಲ” ಎಂದು ತಿಳಿಸಿದರು.
ನಿರೀಕ್ಷೆಗೂ ಮೀರಿ ಜನಸಾಗರ: ಭದ್ರತಾ ವೈಫಲ್ಯದ ಬಗ್ಗೆ ತನಿಖೆ :
ಕ್ರೀಡಾಂಗಣದಲ್ಲಿ 35,000 ಆಸನ ವ್ಯವಸ್ಥೆ ಇದ್ದರೂ, ಆರ್‌ಸಿಬಿ ವಿಜಯೋತ್ಸವ ನೋಡಲು 2-3 ಲಕ್ಷ ಜನ ಸೇರಿದ್ದರು. ರಾಜ್ಯ ಸರ್ಕಾರ ಹಾಗೂ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಕೂಡ ಇಷ್ಟು ಜನರ ಆಗಮನವನ್ನು ನಿರೀಕ್ಷಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

“ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಈ ದುರ್ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳಿಂದ ನ್ಯಾಯಾಂಗ ತನಿಖೆ ನಡೆಸಲಾಗುವುದು. ಭದ್ರತಾ ವೈಫಲ್ಯ ಅಥವಾ ಇನ್ಯಾವುದೇ ಆಗಿರಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ತನಿಖೆ ನಡೆಸಿ ವರದಿ ನೀಡಲು 15 ದಿನ ಕಾಲಾವಕಾಶ ನೀಡಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.
ಸಣ್ಣ ಗೇಟ್‌ನಲ್ಲಾದ ಕಾಲ್ತುಳಿತ – ಸಿಎಂ ಸಮರ್ಥನೆ ಇಲ್ಲ :
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳು ಒಂದು ಸಣ್ಣ ಗೇಟ್‌ನಲ್ಲಿ ಸಾಗುವಾಗ ಕಾಲ್ತುಳಿತ ಸಂಭವಿಸಿದೆ. “ಚಿನ್ನಸ್ವಾಮಿ ದುರ್ಘಟನೆಯನ್ನು ತಾವು ಸಮರ್ಥಸಿಕೊಳ್ಳುತ್ತಿಲ್ಲ. ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ : ಆರ್ ಸಿಬಿ ಸಂಭ್ರಮಾಚರಣೆಗೆ ಸೂತಕದ ಛಾಯೆ : ಕಾಲ್ತುಳಿತದಲ್ಲಿ 12 ಮಂದಿ ಸಾವು?, ಹಲವು ಮಂದಿಗೆ ಗಾಯ
ಸಿಎಂ ಎಕ್ಸ್ ಖಾತೆಯಲ್ಲಿ ಸಂತಾಪ: ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ
ಇನ್ನೊಂದೆಡೆ, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿಗಳು, “ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ನೂಕುನುಗ್ಗಲು ಉಂಟಾಗಿ ಹಲವರು ಪ್ರಾಣ ಕಳೆದುಕೊಂಡು, ಮತ್ತೆ ಕೆಲವರು ಗಂಭೀರ ಗಾಯಗೊಂಡ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಈ ದುರಂತದ ನೋವು ಗೆಲುವಿನ ಸಂಭ್ರಮವನ್ನೂ ಅಳಿಸಿಹಾಕಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು” ಎಂದು ಬರೆದಿದ್ದಾರೆ.
ಸಂದಣಿ ನಿಯಂತ್ರಣ ಮಾಡಲಾಗದೆ ಅಹಿತಕರ ಘಟನೆ ನಡೆಯಬಹುದೆಂಬ ನಿರೀಕ್ಷೆಯಿಂದಲೇ ತಂಡದ ವಿಜಯಯಾತ್ರೆಗೆ ಅವಕಾಶ ನೀಡದೆ ಮುಂಜಾಗ್ರತೆ ವಹಿಸಲಾಗಿತ್ತು. ಹೀಗಿದ್ದರೂ ಕ್ರೀಡಾಂಗಣದ ಬಳಿ ಜನ ಕಿಕ್ಕಿರಿದು ಸಾಗರದಂತೆ ಸೇರಿದ್ದ ಕಾರಣ ನೂಕುನುಗ್ಗಲು ನಡೆದು ಕಾಲ್ತುಳಿತದಿಂದ ಈ ಅವಘಡ ಸಂಭವಿಸಿದೆ. “ಪ್ರೀತಿ – ಅಭಿಮಾನ ಈ ಎಲ್ಲಕ್ಕಿಂತ ಜೀವ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಂಡು, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.























