ಬೆಂಗಳೂರು, ಜೂ.03 www.bengaluruwire.com : ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಲಾ-ಕಾಲೇಜಿನ 13000ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಕರ್ಚಿನಲ್ಲಿ,ಉಚಿತ ನೋಟ್ ಬುಕ್- ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಶಾಸಕರು, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ರವರು ಇಂದು ಚಾಲನೆ ನೀಡಿದರು.
ಬಿ ಟಿ ಎಂ ಕ್ಷೇತ್ರದ ಸ್ಥಳೀಯ ಕೋರಮಂಗಲ ಗ್ರಾಮದ ಸರ್ಕಾರಿ ಪ್ರೈಮರಿ ಮಾಡಲ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ, ಅಲ್ಲಿ ಓದುವ ಮಕ್ಕಳಿಗೆ ಸಾಂಕೇತಿಕವಾಗಿ ಉಚಿತ ನೋಟ್ ಬುಕ್ ಗಳು ಹಾಗೂ ಬ್ಯಾಗ್ ಗಳ ವಿತರಣೆಯನ್ನು ಮಾಡಿದರು.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 23 ಸರ್ಕಾರಿ ಶಾಲಾ,ಕಾಲೇಜುಗಳು, ಸರ್ಕಾರಿ ಅನುದಾನಿತ ಶಾಲೆಗಳು ಹಾಗೂ ಅತ್ಯಂತ ಬಡ ಜನರು ವಾಸಿಸುವ ಪ್ರದೇಶದಲ್ಲಿನ ಕಾನ್ವೆಂಟ್ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಜೂನ್ 9 ರಿಂದ 15 ರೊಳಗೆ ಉಚಿತವಾಗಿ ನೋಟ್ ಬುಕ್ ಗಳು ಮತ್ತು ಬ್ಯಾಗ್ ಗಳನ್ನು ವಿತರಣೆ ಮಾಡಲಾಗುತ್ತಿದೆ.
ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 43 ಶಾಲಾ, ಕಾಲೇಜುಗಳಲ್ಲಿ ಒಟ್ಟಾರೆ 13000 ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಅವರಿಗೆಲ್ಲರಿಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರವರು, ಮಾಜಿ ಬಿಬಿಎಂಪಿ ಸದಸ್ಯರುಗಳು, ಬ್ಲಾಕ್ ಅಧ್ಯಕ್ಷರುಗಳು, ಕಾಂಗ್ರೆಸ್ ಮುಖಂಡರುಗಳೊಡನೆ ಈ ಶಾಲಾ ಕಾಲೇಜುಗಳಿಗೆ ಖುದ್ದು ಭೇಟಿ ನೀಡಿ, ಮಕ್ಕಳಿಗೆ ನೋಟ್ ಬುಕ್ ಹಾಗೂ ಬ್ಯಾಗ್ ಗಳನ್ನು ವಿತರಣೆ ಮಾಡಲಿದ್ದಾರೆ.
