ಬೆಂಗಳೂರು, ಮೇ.28 www.bengaluruwire.com : ಓಲಾ, ಊಬರ್ ಸ್ವಿಗ್ಗಿಯಂತಹ ಅಸಂಘಟಿತ ವಲಯದ ಲಕ್ಷಾಂತರ ಅಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ‘ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಸುಗ್ರೀವಾಜ್ಞೆ-2025’ ಅನ್ನು ಜಾರಿಗೆ ತಂದಿದೆ.
ರಾಜ್ಯದಲ್ಲಿ ಗಿಗ್ ಕಾರ್ಮಿಕರಾಗಿ ದುಡಿಯುತ್ತಿರುವ ಲಕ್ಷಾಂತರ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಹಕ್ಕುಗಳ ರಕ್ಷಣೆ, ಸಾಮಾಜಿಕ ಭದ್ರತೆ, ಆರೋಗ್ಯ, ಸುರಕ್ಷತೆ, ಕಾರ್ಮಿಕರ ಕೌಶಲಾಭಿವೃದ್ಧಿ, ಅಂತ್ಯ ಸಂಸ್ಕಾರ ಧನ ಸಹಾಯ ನೀಡಲು ಅಗ್ರಿಗೇಟರ್ ಗಳು ಮಡೆಸುವ ಪ್ರತಿ ವಹಿವಾಟಿನ ಮೇಲೆ ಶೇ.1ರಿಂದ ಶೇ.2ರಷ್ಟು ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲು ಸರ್ಕಾರದ ಈ ಸುಗ್ರೀವಾಜ್ಞೆಯು ಅವಕಾಶ ಕಲ್ಪಿಸಲಿದೆ. ಇದು ರಾಜ್ಯದ ಲಕ್ಷಾಂತರ ಗಿಗ್ ಕಾರ್ಮಿಕರಿಗೆ ಹೊಸ ಆಶಾಕಿರಣ ಮೂಡಿಸಿದೆ.
ಏನಿದು ಗಿಗ್ ಕಾರ್ಮಿಕರು? :
ಇಂದಿನ ಡಿಜಿಟಲ್ ಯುಗದಲ್ಲಿ, “ಗಿಗ್ ಕಾರ್ಮಿಕರು” ಎಂಬುದು ಹೊಸ ಪರಿಭಾಷೆಯಾಗಿದ್ದು, ಇವರು ಸಾಂಪ್ರದಾಯಿಕ ಉದ್ಯೋಗ ಸಂಬಂಧಗಳ ಹೊರತಾಗಿ, ಡಿಜಿಟಲ್ ವೇದಿಕೆಗಳ ಮೂಲಕ ಅಲ್ಪಾವಧಿ ಅಥವಾ ನಿರ್ದಿಷ್ಟ ಕಾರ್ಯಗಳ ಆಧಾರದ ಮೇಲೆ ಕೆಲಸ ಮಾಡುವವರನ್ನು ಸೂಚಿಸುತ್ತದೆ. ಇವರಿಗೆ ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ಮಾಲೀಕರೇ ಇರುವುದಿಲ್ಲ. ಬದಲಿಗೆ ಬೇಡಿಕೆಯ ಆಧಾರದ ಮೇಲೆ ಸೇವೆಗಳನ್ನು ಒದಗಿಸುತ್ತಾರೆ.

ಉದಾಹರಣೆಗೆ:

* ಓಲಾ, ಊಬರ್ ಚಾಲಕರು: ಇವರು ತಮ್ಮ ವಾಹನಗಳನ್ನು ಬಳಸಿ ಸವಾರರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುತ್ತಾರೆ. ಇವರು ಕಂಪನಿಯ ನೇರ ಉದ್ಯೋಗಿಗಳಲ್ಲ, ಬದಲಿಗೆ ಆ್ಯಪ್ ಆಧಾರಿತ ವೇದಿಕೆಯ ಮೂಲಕ ಸೇವೆ ಒದಗಿಸುತ್ತಾರೆ.
* ಸ್ವಿಗ್ಗಿ, ಜೊಮಾಟೊ ಡೆಲಿವರಿ ಏಜೆಂಟ್‌ಗಳು: ಇವರು ಗ್ರಾಹಕರಿಗೆ ಆಹಾರ ಮತ್ತು ದಿನಸಿ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡುತ್ತಾರೆ. ಇವರೂ ಸಹ ವೇದಿಕೆಯ ಮೂಲಕವೇ ಕಾರ್ಯನಿರ್ವಹಿಸುತ್ತಾರೆ.
* ಅರ್ಬನ್ ಕಂಪನಿ ಸೇವಾ ತಂತ್ರಜ್ಞರು: ಮನೆಗೆ ಬಂದು ರಿಪೇರಿ ಕೆಲಸ ಮಾಡುವವರು, ಸೌಂದರ್ಯ ತಜ್ಞರು ಮುಂತಾದವರು ಸಹ ಗಿಗ್ ಕಾರ್ಮಿಕರ ವ್ಯಾಪ್ತಿಗೆ ಬರುತ್ತಾರೆ.
ಈ ಕಾರ್ಮಿಕರಿಗೆ ಸಾಂಪ್ರದಾಯಿಕ ಉದ್ಯೋಗದಂತೆ ನಿಗದಿತ ಸಂಬಳ, ವಿಮೆ, ಪಿಂಚಣಿ ಅಥವಾ ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳು ಇರುವುದಿಲ್ಲ. ಈ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ಈ ಮಹತ್ವದ ಸುಗ್ರೀವಾಜ್ಞೆಯನ್ನು ಅನುಷ್ಠಾನಕ್ಕೆ ತಂದಿದೆ.
ಸುಗ್ರೀವಾಜ್ಞೆಯ ಪ್ರಮುಖ ಅಂಶಗಳು:
ಈ ಸುಗ್ರೀವಾಜ್ಞೆಯು ಗಿಗ್ ಕಾರ್ಮಿಕರ ಹಕ್ಕುಗಳ ರಕ್ಷಣೆ, ಅವರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಹಲವು ಕ್ರಮಗಳನ್ನು ಒಳಗೊಂಡಿದೆ. ಇದು ಆರೋಗ್ಯ, ಸುರಕ್ಷತೆ, ಪಿಂಚಣಿ, ಭವಿಷ್ಯ ನಿಧಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ಕಾನೂನು ಚೌಕಟ್ಟನ್ನು ಸೃಷ್ಟಿಸುತ್ತದೆ. ಗಿಗ್ ಕೆಲಸವನ್ನು ಒದಗಿಸುವ ವೇದಿಕೆಗಳು (ಅಗ್ರಿಬೇಟರ್‌ಗಳು) ಕಾರ್ಮಿಕರ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸಲು ಮತ್ತು ಸೌಲಭ್ಯಗಳನ್ನು ಒದಗಿಸಲು ಜವಾಬ್ದಾರರಾಗಿರುತ್ತಾರೆ.
ಈ ಹೊಸ ಕಾನೂನು, ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಗಿಗ್ ಕಾರ್ಮಿಕರಿಗೆ ನೆಮ್ಮದಿ ನೀಡುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರವು ಕಾರ್ಮಿಕರ ಕಲ್ಯಾಣಕ್ಕೆ ಬದ್ಧವಾಗಿದೆ ಎಂಬುದನ್ನು ಈ ಕ್ರಮವು ತೋರಿಸುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಇದನ್ನು ಸ್ವಾಗತಿಸಿವೆ. ಮುಂಬರುವ ದಿನಗಳಲ್ಲಿ ಈ ಸುಗ್ರೀವಾಜ್ಞೆಯನ್ನು ಕಾಯಿದೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.