ಬೆಂಗಳೂರು, ಮೇ.27 www.bengaluruwire.com : ಉಲ್ಲಾಳ ಕೆರೆಗೆ ಹೊಂದಿಕೊಂಡ ರಾಜಕಾಲುವೆ ಬಗ್ಗೆ ಮೇ 23ರಂದು ರಿಯಾಲಿಟಿ ಚೆಕ್ ನಡೆಸಿ ಅಲ್ಲಿನ ಬೃಹತ್ ನೀರುಗಾಲುವೆಯಲ್ಲಿ ದುಸ್ಥಿತಿ ಬಗ್ಗೆ ‘ಬೆಂಗಳೂರು ವೈರ್’ ಪ್ರತ್ಯಕ್ಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಇಲ್ಲಿನ ರಾಜಕಾಲುವೆ ಹೂಳನ್ನು, ಕಳೆಗಳನ್ನು ಜೆಸಿಬಿ ಬಳಸಿ ಸ್ವಚ್ಛಗೊಳಿಸಲು ಆರಂಭಿಸಿದ್ದಾರೆ. ಇದು ‘ಬೆಂಗಳೂರು ವೈರ್’ ವರದಿ ಪರಿಣಾಮ.

ಮೇ 23ರಂದು “BW REALITY CHECK | ಉಲ್ಲಾಳ ವಾರ್ಡ್ ರಾಜಕಾಲುವೆಯಲ್ಲಿ ಬೆಳೆದಿದೆ ಜೊಂಡು : ಉಲ್ಲಾಳು ಕೆರೆಯಲ್ಲಿ ತೇಲುತ್ತಿದೆ ಬೆಂಡು ; ಕೊಳಚೆ ನೀರಿಂದ ಸಮೃದ್ಧ!!” ಎಂಬ ಶೀರ್ಷಿಕೆಯಡಿ ಉಲ್ಲಾಳ ಕೆರೆ ಹಾಗೂ ಅದಕ್ಕೆ ಸಂಪರ್ಕ ಹೊಂದಿರುವ ಬೃಹತ್ ನೀರುಗಾಲುವೆ ದುಸ್ಥಿತಿಯ ಬಗ್ಗೆ ವಿಸ್ತ್ರತವಾಗಿ ‘ಬೆಂಗಳೂರು ವೈರ್’ ಪ್ರತ್ಯಕ್ಷ ವರದಿ ಪ್ರಕಟಿಸಿತ್ತು.
ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ರಾಜರಾಜೇಶ್ವರಿ ವಲಯ ಆಯುಕ್ತರು ಹಾಗೂ ಅಲ್ಲಿನ ಬೃಹತ್ ನೀರುಗಾಲುವೆ ವಿಭಾಗದ ಅಧಿಕಾರಿಗಳು ಉಲ್ಲಾಳ ಕೆರೆಗೆ ರಾಜಕಾಲುವೆ ನೀರು ಪ್ರವೇಶಿಸುವ (Inlet Point) ಹಾಗೂ ಕೆರೆಯಿಂದ ನೀರು ನಿರ್ಗಮಿಸುವ ದ್ವಾರ (Outlet Point) ಮಾರ್ಗದಲ್ಲಿ ತುಂಬಿರುವ ಹೂಳು, ಜೊಂಡು ಹಾಗೂ ಕಳೆಗಳನ್ನು ಮೇ 26ರಿಂದ ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ.

ಬಿಬಿಎಂಪಿಯಲ್ಲಿನ 860 ಕಿ.ಮೀ ಉದ್ದದ ರಾಜಕಾಲುವೆ ಮಾರ್ಗದಲ್ಲಿ ಬಹುತೇಕ ಕಡೆ ರಾಜಕಾಲುವೆಯಲ್ಲಿನ ಹೂಳು, ಘನತ್ಯಾಜ್ಯ ಹಾಗೂ ಕಳೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವ, ಕಾಲುವೆಯ ತಡೆಗೋಡೆಗಳನ್ನು ಭದ್ರಪಡಿಸುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ವಾರ್ಷಿಕ ನಿರ್ವಹಣೆ ಗುತ್ತಿಗೆ ಪಡೆದ ಸಂಸ್ಥೆಗಳು ನಿರ್ವಹಿಸಬೇಕು. ಅದನ್ನು ಆಯಾ ವಿಭಾಗ ಹಾಗೂ ಉಪವಿಭಾಗದ ಇಂಜಿನಿಯರ್ ಗಳು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಬೇಕು.


2019-20 ರಿಂದ ನಗರದ ಬೃಹತ್ ನೀರುಗಾಲುವೆ ವಾರ್ಷಿಕ ನಿರ್ವಹಣೆ ಗುತ್ತಿಗೆ ನೀಡುವ ವ್ಯವಸ್ಥೆ ಆರಂಭವಾಗಿತ್ತು. ಆದರೆ ನಗರದ ಎಷ್ಟೋ ರಾಜಕಾಲುವೆಗಳಲ್ಲಿ ಸರಿಯಾಗಿ ಹೂಳು ತೆಗೆಯುತ್ತಿಲ್ಲ. ಆದರೆ ಕಾಲ ಕಾಲಕ್ಕೆ ಕಾಂಟ್ರಾಕ್ಟರ್ ಗಳು ಬಿಲ್ ಮಾಡಿ ಹಣ ಮಾಡುತ್ತಿದ್ದಾರಷ್ಟೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಪರಿಶೀಲಿಸಿ ಅವ್ಯವಸ್ಥೆಯನ್ನು ಸರಿಪಡಿಸಬೇಕಿದೆ.

ಇನ್ನು ಹಲವು ಪ್ರಾಣಿ-ಪಕ್ಷಿಗಳ ಅವಾಸಸ್ಥಾನವಾಗಿರುವ ಜೀವ ವೈವಿಧ್ಯತೆ ಹೊಂದಿರುವ ಉಲ್ಲಾಳ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಒಂದೂವರೆ ಕೋಟಿ ರೂ.ಗಳಷ್ಟು ಹಣವನ್ನು 2025-26ನೇ ಸಾಲಿನ ಕಾರ್ಯಯೋಜನೆಯಲ್ಲಿ ಸೇರಿಸಿರುವುದಾಗಿ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ‘ಬೆಂಗಳೂರು ವೈರ್’ ಗೆ ಖಚಿತಪಡಿಸಿದ್ದಾರೆ.
2021 ಜನವರಿಯಿಂದ ನಿರಂತರವಾಗಿ ರಾಜಧಾನಿಯ ಸುದ್ದಿಗಳಿಗೆ ಆದ್ಯತೆಯಿಟ್ಟುಕೊಂಡು ನಿಮ್ಮ ‘ಬೆಂಗಳೂರು ವೈರ್’ ಸ್ವತಂತ್ರ ಮತ್ತು ವಾಸ್ತವ ಸುದ್ದಿ ಮೂಲಮಂತ್ರದೊಂದಿಗೆ ಆಳುವ ಸರ್ಕಾರವನ್ನು ಸದಾ ಎಚ್ಚರಿಸುತ್ತಾ, ಜನಜಾಗೃತಿ ಮೂಡಿಸುತ್ತಾ ಬಂದಿದೆ. ನಮ್ಮ ಈ ಕಾರ್ಯ ಹೀಗೆ ಮುಂದುವರೆಯಲು ನಿಮ್ಮ ನಿರಂತರ ಬೆಂಬಲ- ಪ್ರೋತ್ಸಾಹವೇ ಕಾರಣ. ಇದಕ್ಕೆ ನಾವು ಚಿರಋಣಿ.