ಬೆಂಗಳೂರು, ಮೇ.26 www.bengaluruwire.com : ಸಿಲಿಕಾನ್ ಸಿಟಿಯಲ್ಲಿ ಪೂರ್ವ ಮುಂಗಾರಿನ ಮಳೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನಬ183 ಕೆರೆಗಳ ಪೈಕಿ ಈಗಾಗಲೇ 73 ಕೆರೆಗಳು ತುಂಬಿವೆ ಎಂದು ಬಿಬಿಎಂಪಿಯೇ ತಿಳಿಸಿದೆ. ಕೋಡಿ ಹರಿದು ಪ್ರವಾಹ ನಿಯಂತ್ರಿಸಲು ಅನುಕೂಲವಾಗುತ್ತಿದ್ದ ಕೆರೆಗಳ ತೂಬು ನಿರ್ಮಾಣ ಯೋಜನೆ ಕೇವಲ ಸರ್ಕಾರ ಬದಲಾಗಿದ್ದಕ್ಕೆ ಕೈತಪ್ಪಿ ಹೋಗಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
2023ರಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ 148 ಕೆರೆಗಳಿಗೆ ತೂಬು (Sluice Gate) ನಿರ್ಮಾಣ ಮಾಡಲು ಅಂದಿನ ಬಿಜೆಪಿ ನೇತೃತ್ವದ ಸರ್ಕಾರ ಅನುಮತಿ ನೀಡಿತ್ತು.
ಹೀಗಾಗಿ 148 ಕೆರೆಗಳಿಗೆ ‘ಸ್ಲೂಯಿಸ್ ಗೇಟ್’ (ತೂಬು) ಅಳವಡಿಸಲು ರಾಜ್ಯ ಸರ್ಕಾರ 2023 ಆರಂಭದಲ್ಲೇ ₹36.85 ಕೋಟಿ ಅನುಮೋದನೆ ನೀಡಿದ್ದರೂ, ಅಷ್ಟು ಹಣವನ್ನು 102 ಕೆರೆಗಳಿಗೇ ಬಿಬಿಎಂಪಿ ವೆಚ್ಚ ಮಾಡಲು ಹೊರಟಿತ್ತು. ಆಗಲೇ 46 ಕೆರೆಗಳನ್ನು ಪಾಲಿಕೆ ಕೈಬಿಟ್ಟಿತ್ತು.
ಆನಂತರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಿಂದಿನ ಸರ್ಕಾರ ಅನುಮೋದನೆ ನೀಡಿದ್ದ ನಗರದಲ್ಲಿನ ಪ್ರಮುಖ ಕೆರೆಗಳಿಗೆ ಸ್ಲೂಸ್ ಗೇಟ್ ನಿರ್ಮಿಸುವ ಯೋಜನೆಯನ್ನೇ ತಡೆಹಿಡಿದಿತ್ತು. ಆ ಕಾರಣ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಯ ನೀರು ಕೆರೆಗಳ ಜಾಲದಲ್ಲಿ ಪ್ರವಾಹ ನಿಯಂತ್ರಿಸುವಲ್ಲಿ ಅನುಕೂಲ ಕಲ್ಪಿಸುವ ಕೆಲಸಕ್ಕೆ ವಿಘ್ನ ಎದುರಾಗಿದೆ. ಈ ಹಿಂದೆ ಈ ಯೋಜನೆಗೆ ಮೀಸಲಿಟ್ಟ ಹಣ ರದ್ದಾದರೂ ಕೆರೆಗಳ ಜೀರ್ಣೋದ್ಧಾರಕ್ಕೆ ಮೀಸಲಿಟ್ಟ ಅಲ್ಪಸ್ವಲ್ಪ ಹಣದಲ್ಲೇ ಪಾಲಿಕೆ ಅಧಿಕಾರಿಗಳು ಈತನಕ 13 ಕೆರೆಗಳಿಗೆ ಸ್ಲೂಸ್ ಗೇಟ್ ಗಳನ್ನು ನಿರ್ಮಿಸಲು ಸಾಧ್ಯವಾಗಿದೆಯಷ್ಟೆ.


ಈ ಬಾರಿ ನಗರದಲ್ಲಿ ಪೂರ್ವ ಮುಂಗಾರು ಸೃಷ್ಟಿಸಿದ ಮಳೆಯ ಅವಾಂತರದಿಂದ ನಗರದಲ್ಲಿ ವರುಣನ ಆರ್ಭಟದಿಂದಾಗಿ ಜಲಗಂಡಾಂತರ ಸೃಷ್ಟಿಯಾಗಿರುವಾಗ, ಕೆರೆಗಳಿಂದ ಬೃಹತ್ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಹೀಗಾಗಿ ಮಳೆ ನೀರಿನ ಹರಿವಿನ ಪ್ರಮಾಣ ನಿಯಂತ್ರಿಸಿದರೆ ಮುಳುಗಡೆಯಂತಹ ಸಮಸ್ಯೆ ಬರುವುದಿಲ್ಲ. ಆದರೆ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದವರ ಎಡವಟ್ಟಿನಿಂದಾಗಿ ನಗರದ ಪ್ರಮುಖ ಕೆರೆಗಳಿಗೆ ತೂಬು ನಿರ್ಮಾಣ ಸಾಧ್ಯವಾಗಿಲ್ಲ.

“ಬಿಜೆಪಿ ಸರ್ಕಾರ ಬದಲಾದ ಮೇಲೆ ಈ ಯೋಜನೆಗೆ ಹಣ ಮೀಸಲಿಟ್ಟರೂ, ಹೊಸ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಮೀಸಲಿಟ್ಟ ₹36.85 ಹಣವನ್ನು ರದ್ದು ಮಾಡಿತ್ತು. ಹೀಗಾಗಿ ಇನ್ನಿತರ ಕೆರೆ ಕೆಲಸಗಳ ನಡುವೆ 13 ಕೆರೆಗಳಲ್ಲಿ ತೂಬನ್ನು ನಿರ್ಮಾಣ ಮಾಡಲಾಗಿದೆ. 7 ಕೆರೆಗಳಿಗೆ ಸ್ಲೂಸ್ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. 38 ಕೆರೆಗಳಿಗೆ 14 ಕೋಟಿ ರೂ. ನೀಡುವಂತೆ ಬಿಬಿಎಂಪಿ ಚೀಫ್ ಕಮಿಷನರ್ ಗೆ ಪ್ರಸ್ತಾವನೆ ಕಳುಹಿಸಲಾಗಿದೆ” ಎಂದು ಬಿಬಿಎಂಪಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
2022ರ ಸೆಪ್ಟೆಂಬರ್‌ನಲ್ಲಿ ನಗರದಲ್ಲಿ ಅತಿಹೆಚ್ಚು ಮಳೆ ಸುರಿಯಿತು. ಈ ಸಂದರ್ಭದಲ್ಲಿ ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ವಲಯಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿ, ನಾಗರಿಕರ ಆಸ್ತಿಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಆ ಸಂದರ್ಭದಲ್ಲಿ ಕೆರೆಗಳು ಕೋಡಿ ಹರಿದು ಬೃಹತ್ ಪ್ರಮಾಣದಲ್ಲಿ ನೀರು ಹರಿಯಿತು. ಹೀಗಾಗಿ ನಗರದ ಜನತೆ ಸಾಕಷ್ಟು ಪರಿಪಾಡಲು ಪಟ್ಟಿದ್ದರು.
ಇದನ್ನು ನಿಯಂತ್ರಿಸಲು ಹಾಗೂ ನೀರಿನ ಹರಿವಿನ ಗತಿಯನ್ನು ಕಡಿಮೆ ಮಾಡಲು ಸರ್ಕಾರದ ಆದೇಶದಂತೆ (ನಅಇ 782 ಎಂಎನ್‌ವೈ 2022 (ಇ) ಬಿಬಿಎಂಪಿ ತೂಬುಗಳನ್ನು ನಿರ್ಮಿಸಲು ಮುಂದಾಗಿತ್ತು. ಆದರೆ ಅಂದಿನಿಂದ ಈ ತನಕ ಬಿಬಿಎಂಪಿಯು 13 ಕೆರೆಗಳಿಗಷ್ಟೇ ತೂಬು ನಿರ್ಮಿಸಲು ಸಾಧ್ಯವಾಗಿದೆ. ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಭೂಗತ ಸುರಂಗಮಾರ್ಗ, ವೈಟ್ ಟಾಪಿಂಗ್ ರಸ್ತೆಗಳು, ರಾಜಕಾಲುವೆಗಳ ಅಭಿವೃದ್ಧಿ ಕೆಲಸಗಳು, ಘನತ್ಯಾಜ್ಯ ವಿಲೇವಾರಿ ಹೀಗೆ ವಿವಿಧ ಯೋಜನೆಗಳಿಗೆ ನೂರಾರು ಕೋಟಿ ರೂ. ಸುರಿಯುವ ರಾಜ್ಯ ಸರ್ಕಾರಕ್ಕೆ, ನಗರದ ಪರಿಸರ ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ಕೆರೆಗಳಿಗೆ ತೂಬು ನಿರ್ಮಿಸುವ ಪ್ರಮುಖವಾದ ಯೋಜನೆಗೆ ಹಣ ಮೀಸಲಿಡುವಲ್ಲಿ ವಿಫಲವಾಗಿದೆ.

“ಪ್ರಮುಖವಾಗಿ ನಗರದಲ್ಲಿನ ಕೆರೆಗಳ ಸಂರಕ್ಷಣೆ, ಪರಿಸರ, ಅಂತರ್ಜಲ ಮರುಪೂರಣಕ್ಕೆ ತೂಬು ಅಳವಡಿಸುವ ಈ ಯೋಜನೆ ಮುಖ್ಯ. ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ, ಬದಲಾವಣೆಯಾಗಲಿ, ಜನರ ಮತ್ತು ನಗರದ ಹಿತದೃಷ್ಟಿಯಿಂದ ಪ್ರವಾಹ ನಿಯಂತ್ರಿಸಲು, ಇಂತಹ ಯೋಜನೆಗೆ ಮೀಸಲಿಟ್ಟ ಹಣವನ್ನು ತಡೆಹಿಡಿಯಬಾರದು. ಪ್ರವಾಹ ನಿಯಂತ್ರಣ ಹಾಗೂ ಕೆರೆಗಳಲ್ಲಿ ನೀರು ಸಂಗ್ರಹಕ್ಕೆ ಸ್ಲೂಸ್ ಗೇಟ್ ನಿರ್ಮಾಣವಾದರೆ ಅನುಕೂಲ. ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ”.
– ರವಿಚಂದರ್, ನಗರ ಯೋಜನಾ ತಜ್ಞ
ಬಿಬಿಎಂಪಿ ತನ್ನ ವ್ಯಾಪ್ತಿಯ 102 ಕೆರೆಗಳಿಗೆ ‘ಸ್ಲೂಯಿಸ್ ಗೇಟ್’ ನಿರ್ಮಿಸಲು ₹36.85 ಕೋಟಿ ವೆಚ್ಚ ಮಾಡಬೇಕಾಗಿತ್ತು. ಆದರೆ ರಾಜಕಾರಣಕ್ಕೆ ಈ ಯೋಜನೆ ಬಲಿಯಾಗಿದೆಯಷ್ಟೆ. ಹಿಂದಿನ ಕಾಲದಲ್ಲಿ ಕೆರೆಗೆ ನೀರನ್ನು ನಿಧಾನವಾಗಿ ಹರಿಸಲು ಕಲ್ಲಿನ ಕಂಬದ ರೂಪದಲ್ಲಿ ನಿರ್ಮಿಸಲಾಗುತ್ತಿದ್ದ ‘ತೂಬು’ ವಿಧಾನವನ್ನೇ ಬಿಬಿಎಂಪಿ ಹೈಟೆಕ್ ಆಗಿ 13 ಕಡೆಗಳಲ್ಲಿ ‘ಸ್ಲೂಯಿಸ್ ಗೇಟ್’ ಆಗಿ ನಿರ್ಮಣ ಮಾಡಲು ಶಕ್ತವಾಗಿದೆಯಷ್ಟೆ.
ರಾಜಕಾಲುವೆಯಲ್ಲಿ ನೂರಾರು ಕೋಟಿ ಜನರ ಹಣ ಹರಿದು ಹೋಗಿದೆ :
ಬೆಂಗಳೂರಿನಲ್ಲಿ ಒಟ್ಟಾರೆ 860 ಕಿ.ಮೀ ಉದ್ದದ ರಾಜಕಾಲುವೆಯಿದೆ. ಆ ಪೈಕಿ 491 ಕಿ.ಮೀ ಕಾಲುವೆಯಲ್ಲಿ ತಡೆಗೋಡೆ, ಕಾಂಕ್ರಿಟ್ ನೆಲಹಾಸು ಕಾರ್ಯ ಮುಗಿದಿದೆ. 125 ಕಿ.ಮೀ ರಾಜಕಾಲುವೆ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ಉಳಿದಂತೆ 173 ರಾಜಕಾಲುವೆ ಅಭಿವೃದ್ಧಿಗೆ ವಿಶ್ವಬ್ಯಾಂಕಿಂದ ₹2000 ಕೋಟಿ ಸಾಲ ಪಡೆದು ಕಾಮಗಾರಿ ಕೈಗೊಳ್ಳಲು ಟೆಂಡರ್ ಪೂರ್ಣಗೊಂಡಿದೆ. ಇನ್ನು ಮೂರು ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜಕಾಲುವೆಯಲ್ಲಿ ಕೋಟಿ ಕೋಟಿ ಜನರ ತೆರಿಗೆ ಹಣ ಕಾಮಗಾರಿಗೆ ಹರಿದು ಹೋದರೂ ನಗರದಾದ್ಯಂತ ನೀರಿನ ಸರಾಗ ಹರಿವಿನ್ನು ಸಂಪೂರ್ಣವಾಗಿ ಸಾಧ್ಯವಾಗಿಲ್ಲ.

ಆದರೆ ಹಲವು ಕಡೆ ಪ್ರವಾಹ ಸಂಭವಿಸುವ ರಾಜಕಾಲುವೆ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ರಾಜಕಾಲುವೆ ಆಳ, ಅಗಲದಲ್ಲಿ ವ್ಯತ್ಯಾಸ ಮಾಡಿ ನಿರ್ಮಾಣ ಮಾಡಲಾಗಿದೆ. ಸೂಕ್ತ ರೀತಿ ಕಾಲಕಾಲಕ್ಕೆ ಹೂಳೆತ್ತದಿರುವುದು, ಕೆರೆಗಳಿಗೆ ಸಮರ್ಪಕವಾಗಿ ರಾಜಕಾಲುವೆ ನೀರು ಹರಿದು ಹೋಗಲು ಸಮಸ್ಯೆಗಳಿವೆ. ರಾಜಕಾಲುವೆಗಳಿಗಿನ ಎತ್ತರಕ್ಕಿಂತ ಕೆಳಭಾಗದಲ್ಲಿ ಬಡಾವಣೆ ನಿರ್ಮಿಸಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಪ್ರೈಮರಿ ಡ್ರೈನ್ ಹಲವು ಕಡೆ ತಡೆಗೋಡೆ ಇರದಿರುವುದು, ರಸ್ತೆಯ ಶೋಲ್ಡರ್ ಡ್ರೈನ್ ಕಟ್ಟಿಕೊಂಡಿರುವುದು ಸೇರಿದಂತೆ ಹಲವು ಕಾರಣಗಳಿಂದ ನಗರದಲ್ಲಿ ರಸ್ತೆಗಳಲ್ಲಿ, ವಿವಿಧೆಡೆ ಮಳೆಬಂದಾಗ ಅವಾಂತರ ಸೃಷ್ಟಿಯಾಗಲು ಮೂಲ ಕಾರಣ ಎಂದು ನಗರ ಯೋಜನಾ ತಜ್ಞರು, ನಾಗರೀಕ ಸಂಘಟನೆಗಳು ಬಿಬಿಎಂಪಿಗೆ ತಿಳಿಸಿವೆ. ಆದರೂ ಈತನಕ ಆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಚೀಫ್ ಕಮಿಷನರ್ ಮಳೆಗಾಲದ ಸಭೆ!! :
ಬಿಬಿಎಂಪಿ ನೂತನ ಆಯುಕ್ತ ಮಹೇಶ್ವರ್ ರಾವ್, ಮುಂಬರುವ ಮಳೆಗಾಲವನ್ನು ದೃಷ್ಟಿಯಲ್ಲಿಟ್ಟುಕೊಂಡು, ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಪ್ರವಾಹ ಪೀಡಿತ ಪ್ರದೇಶಗಳ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಹೇಳುತ್ತಿದ್ದಾರೆ. ರಾಜಕಾಲುವೆಗಳ ಸ್ವಚ್ಛತೆ ಮತ್ತು ಹೂಳು ತೆಗೆದು ಸ್ವಚ್ಛತೆ ಕಾಪಾಡುವಂತೆ ಸೂಚಿಸಿದ್ದಾರೆ. ವಾಸ್ತವದಲ್ಲಿ ಟನ್ ಗಟ್ಟಲೆ ಹೂಳು ಇನ್ನೂ ರಾಜಕಾಲುವೆಯ ತಳದಲ್ಲೇ ಬೀಡುಬಿಟ್ಟಿದೆ.
ಪ್ರವಾಹ ಸಂಭವಿಸುವ ಸ್ಥಳಗಳ “ಮ್ಯಾಜಿಕ್” ನಂಬರ್ ಕಡಿಮೆಯಾಗಿಲ್ಲ :

ಕಳೆದ ಎರಡು ಮೂರು ವರ್ಷಗಳಿಂದ ನಗರದಲ್ಲಿ 210 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ ಈಗಾಗಲೇ 166 ಕಡೆಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಉಳಿದ 44 ಸ್ಥಳಗಳಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು ಅಂತ ಹಿಂದಿನ ಚೀಫ್ ಕಮಿಷನರ್ ಹಾಗೂ ಈಗಿನ ಚೀಫ್ ಕಮಿಷನರ್ ಹೇಳುತ್ತಲೇ ಬಂದರೂ ಆ ಮ್ಯಾಜಿಕ್ ನಂಬರ್ ಮಾತ್ರ ಕಡಿಮೆಯಾಗಿಲ್ಲ. ಪ್ರವಾಹ ಸಮಸ್ಯೆ ಬಗೆಹರಿದಿಲ್ಲ.
ಇಂದು ಕೂಡ ಬಿಬಿಎಂಪಿ ಚೀಫ್ ಕಮಿಷನರ್ ಮಹೇಶ್ವರ ರಾವ್ ಹಿರಿಯ ಅಧಿಕಾರಗಳ ಸಭೆ ನಡೆಸಿದ್ದಾರೆ. “ಪ್ರವಾಹ ಪೀಡಿತ ಪ್ರದೇಶಗಳ ಪೈಕಿ ಈಗಾಗಲೇ 166 ಕಡೆಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ವಲಯ ಆಯುಕ್ತರು ಅವುಗಳಿಗೆ ದೃಢೀಕರಣ ನೀಡಬೇಕು. ಉಳಿದ 44 ಸ್ಥಳಗಳಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು” ಎಂದು ಸೂಚಿಸಿದ್ದಾರೆ.
ಉಳಿದ ಕೆರೆಗಳಿಗೆ ಸ್ಲೂಯಿಸ್ ಗೇಟ್ ಅಳವಡಿಕೆ :
“ಪಾಲಿಕೆ ವ್ಯಾಪ್ತಿಯಲ್ಲಿರುವ 183 ಕೆರೆಗಳ ಪೈಕಿ ಈಗಾಗಲೇ 13 ಕೆರೆಗಳಿಗೆ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ಕೆರೆಗಳಿಗೂ ಹಂತ-ಹಂತವಾಗಿ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲು ಮತ್ತು ಹೂಳು ತೆರವುಗೊಳಿಸದ ಕೆರೆಗಳಲ್ಲಿ ಹೂಳು ತೆಗೆಯುವ ಬಗ್ಗೆ ಯೋಜನೆ ರೂಪಿಸಿ” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಬಜೆಟ್ ನಲ್ಲಿ ಕೆರೆಗಳಿಗೆ ಸ್ಲೂಜ್ ಗೇಟ್ ನಿರ್ಮಾಣಕ್ಕೆ ಹಣ ಮೀಸಲಿಟ್ಟಿದ್ಯಾ? ಎಂಬುದು ಮುಖ್ಯ ಪ್ರಶ್ನೆ.
ಈ ಕೆರೆಗಳಲ್ಲಿ ತೂಬು ನಿರ್ಮಾಣವಾಗಿ, ಕಾರ್ಯನಿರ್ವಹಿಸುತ್ತಿರುವ ಪಟ್ಟಿ :
ಮಹದೇವಪುರ ವಲಯ: ನಲ್ಲೂರಹಳ್ಳಿ ಕೆರೆ, ದೊಡ್ಡ ನೆಕ್ಕುಂಡಿ ಕೆರೆ, ಭೋಗನಹಳ್ಳಿ ಕೆರೆ, ರಾಂಪುರ ಕೆರೆ, ಹೊರಮಾವು ಜಯಂತಿ, ಕೌಡೇನಹಳ್ಳಿ,
ಬೊಮ್ಮನಹಳ್ಳಿ ವಲಯ: ಬೇಗೂರು
ಯಲಹಂಕ ವಲಯ: ಅಮೃತಹಳ್ಳಿ, ರಾಚೇನಹಳ್ಳಿ, ಜಕ್ಕೂರು, ಸಿಂಗಾಪುರ, ನಾಗವಾರ
ದಕ್ಷಿಣ ವಲಯ : ಮೇಸ್ತ್ರಿಪಾಳ್ಯ