ಬೆಂಗಳೂರು, ಮೇ.25 www.bengaluruwire.com : ರಾಜ್ಯದಲ್ಲಿ ಒಂದು ವೇಳೆ ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಪ್ರತಿಪಕ್ಷ ಬಿಜೆಪಿ ಸ್ವತಂತ್ರವಾಗಿ ಸ್ಪಷ್ಟ ಜನಾದೇಶ ಪಡೆದು ಸರ್ಕಾರ ರಚಿಸಲಿದೆ ಎಂದು ಖಾಸಗಿ ಸಂಸ್ಥೆಯ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮುಂದುವರಿದಿದ್ದಾರೆ ಎಂಬುದು ಸಮೀಕ್ಷೆಯ ಕುತೂಹಲಕಾರಿ ಅಂಶವಾಗಿದೆ. ಒಂದು ತಿಂಗಳ ಕಾಲ ನಡೆದ ಸಮೀಕ್ಷೆಯಲ್ಲಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 10,481 ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಹೈದರಾಬಾದ್ ಮೂಲದ ಪೀಪಲ್ಸ್ ಪಲ್ಸ್ ಆರ್ಗನೈಸೇಷನ್, ಕೊಮೆಡೊ ಟೆಕ್ನಾಲಜೀಸ್ ಜೊತೆಗೂಡಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ್ದು, ಈ ವರದಿಯಲ್ಲಿನ ಅಂಶಗಳು ಬಹಿರಂಗವಾಗಿದೆ. ಹೊರಬಿದ್ದಿದೆ. ಈ ಸರ್ವೆಯಲ್ಲಿ ಬಿಜೆಪಿ 136-159 ಸ್ಥಾನಗಳನ್ನು ಗಳಿಸುವ ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿದೆ.
ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ:

ಕಾಂಗ್ರೆಸ್ 40.3 ಪ್ರತಿಶತದಷ್ಟು ಮತ ಹಂಚಿಕೆಯೊಂದಿಗೆ (2023ರಲ್ಲಿ 42.88 ಪ್ರತಿಶತ) 62-82 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಆಡಳಿತ ಪಕ್ಷವು ಗಮನಾರ್ಹ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ.


ಕಳೆದ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್, ಆನಂತರ ತನ್ನ ಹಲವಾರು ನಿರ್ಧಾರಗಳಿಂದ ಜನರಿಗೆ ಬೇಸರ ತರಿಸಿದೆ ಎನ್ನಲಾಗಿದೆ. ಅಭಿವೃದ್ಧಿ ಕೆಲಸಗಳ ಜೊತೆಗೆ ವಾಲ್ಮೀಕಿ ಹಗರಣ, ಮುಡಾ ಹಗರಣಗಳಂತಹ ಆರೋಪಗಳು ಸರ್ಕಾರಕ್ಕೆ ಭಾರೀ ಮುಜುಗರ ತಂದೊಡ್ಡಿದ್ದು, ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಕಾರಣವಾಗಿತ್ತು. ಹೀಗಾಗಿ, ಇತ್ತೀಚೆಗೆ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಹೆಚ್ಚಿನ ಜನರು 2 ವರ್ಷಗಳ ಕಾಂಗ್ರೆಸ್ ಆಡಳಿತ ತೃಪ್ತಿ ತಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಗೆ ಐತಿಹಾಸಿಕ ಅವಕಾಶ:

ಕಳೆದ 20 ವರ್ಷಗಳಿಂದ ಕರ್ನಾಟಕ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಿಜೆಪಿ, ಮೂರು ಬಾರಿ (2004, 2008, 2018) ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, 224 ಸ್ಥಾನಗಳಲ್ಲಿ 113 ಸ್ಥಾನಗಳ ಸರಳ ಬಹುಮತವನ್ನು ಎಂದಿಗೂ ಗಳಿಸಿರಲಿಲ್ಲ. ಆದರೆ, ಈಗ ಚುನಾವಣೆ ನಡೆದರೆ 136ರಿಂದ 159 ಸೀಟುಗಳು ಬಿಜೆಪಿಗೆ ಬಂದು, ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಜೆಡಿಎಸ್ ಪರಿಸ್ಥಿತಿಯೇನು ಹಾಗಾದ್ರೆ?:
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್, ಈಗಲೂ ಅದೇ ಮೈತ್ರಿಯಲ್ಲಿ ಮುಂದುವರಿದಿದೆ. ಆದರೆ, ಸಮೀಕ್ಷೆಯ ಪ್ರಕಾರ, ಜೆಡಿಎಸ್ ಕೇವಲ 3-6 ಸ್ಥಾನಗಳನ್ನು ಮಾತ್ರ ಗೆಲ್ಲುವ ಮೂಲಕ ಶೇ. 5ರಷ್ಟು (2023 ರಲ್ಲಿ ಶೇ. 18.3) ಮತಗಳ ಪಾಲನ್ನು ಪಡೆಯಲಿದೆ.
ಸಿದ್ದರಾಮಯ್ಯ ಸಿಎಂ ಜನಪ್ರಿಯತೆ ಹೀಗಿದೆ :
ಪಕ್ಷಾತೀತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಮುಖವಾಗಿ ಉಳಿದಿದ್ದಾರೆ. ಶೇಕಡಾ 29.2 ರಷ್ಟು ಮತದಾರರು ಸಿದ್ದರಾಮಯ್ಯ ಅವರಿಗೆ ಮತ ಹಾಕಿದರೆ, ಶೇಕಡಾ 10.7 ರಷ್ಟು ಮತದಾರರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮತ ನೀಡಿದ್ದಾರೆ. ಕುತೂಹಲಕಾರಿಯಾಗಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ (ಶೇಕಡಾ 5.5), ಬಸವರಾಜ ಬೊಮ್ಮಾಯಿ (ಶೇಕಡಾ 3.6) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (ಶೇಕಡಾ 5.2) ಅವರಂತಹ ಬಿಜೆಪಿ ಅಭ್ಯರ್ಥಿಗಳಲ್ಲಿ ಯಾರೂ ಎರಡಂಕಿಯ ಗಡಿ ದಾಟದಿದ್ದರೂ, ಶೇಕಡಾ 16.9 ರಷ್ಟು ಜನರು ಯಾವುದೇ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇತರರಿಗೆ ಶೇ.12.7ರಷ್ಟು ಮತ ನೀಡಿದ್ದಾರೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಜನತೆ.
ಸರ್ಕಾರದ ಕಾರ್ಯವೈಖರಿ ಬಗ್ಗೆ ಏನಂತಾರೆ ಜನ?:
ಶೇಕಡಾ 48.4 ರಷ್ಟು ಜನರು ಕಾಂಗ್ರೆಸ್ ಆಡಳಿತವು ತುಂಬಾ ಒಳ್ಳೆಯದು ಎಂದು ಭಾವಿಸಿದರೆ, ಉಳಿದ ಶೇಕಡಾ 51.6 ರಷ್ಟು ಜನರು ಅದು ಸರಾಸರಿ, ಕೆಟ್ಟದು ಅಥವಾ ತುಂಬಾ ಕೆಟ್ಟದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾತಿ ಜನಗಣತಿಗೆ ಬಗ್ಗೆ ಜನರ ಸಂಪೂರ್ಣ ಒಲವು ಶೇ.26:
ಸರ್ವೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ.42.3ರಷ್ಟು ಜನರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು (ಜಾತಿ ಜನಗಣತಿ) ಸಂಪೂರ್ಣವಾಗಿ ಅಥವಾ ಭಾಗಶಃ (ಶೇ. 26.3 ರಷ್ಟು ಸಂಪೂರ್ಣವಾಗಿ, ಶೇ.16 ಭಾಗಶಃ) ನಂಬಿದ್ದಾರೆ. ಶೇ. 35ರಷ್ಟು ಜನರು ವರದಿಯನ್ನು ನಂಬಲಿಲ್ಲ. ಆದರೆ ಶೇ.22.7ರಷ್ಟು ಜನರು ಈ ಪ್ರಕ್ರಿಯೆಯ ಬಗ್ಗೆ ತಿಳಿದಿರಲಿಲ್ಲ.
ಗೃಹ ಲಕ್ಷ್ಮಿ ಅತ್ಯಂತ ಜನಪ್ರಿಯ ಖಾತರಿ ಯೋಜನೆ :
ಶೇಕಡಾ 45.4 ರಷ್ಟು ಮತದಾರರ ಬಹುಮತದೊಂದಿಗೆ, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ.ಗಳನ್ನು ಒದಗಿಸುವ ಗೃಹ ಲಕ್ಷ್ಮಿ ಯೋಜನೆಯು ಕಾಂಗ್ರೆಸ್‌ನ ಐದು ಪ್ರಮುಖ ಭರವಸೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಶಕ್ತಿ (ಶೇಕಡಾ 19), ಅನ್ನ ಭಾಗ್ಯ (ಶೇಕಡಾ 17), ಗೃಹ ಜ್ಯೋತಿ (ಪ್ರತಿಶತ 13.5) ಮತ್ತು ಯುವ ನಿಧಿ (ಶೇಕಡಾ 2) ಯೋಜನೆಗಳು ನಂತರದ ಸ್ಥಾನಗಳಲ್ಲಿವೆ. ಶೇಕಡ 3 ರಷ್ಟು ಪ್ರತಿಕ್ರಿಯಿಸಿದವರು ತಮಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸಮೀಕ್ಷೆಯ ಸಂಪೂರ್ಣ ವರದಿಗೆ ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ ಓದಿ : https://peoplespulse.in/pdf/reports/Pulse%20of%20the%20Karnataka%20State.pdf