ಬೆಂಗಳೂರು, ಮೇ.24 www.bengaluruwire.com : ನಗರದ ಹೆಮ್ಮೆಯ ಲಾಲ್ ಬಾಗ್ ಬಟಾನಿಕಲ್ ಗಾರ್ಡನ್‌ನಲ್ಲಿ ಸುಮಾರು 150 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿದ್ದ ಅಪರೂಪದ ‘ಫೈಕಸ್ ಕನ್ನಿಂಗ್‌ಹ್ಯಾಮಿ’ ಪ್ರಭೇದದ ಬೃಹತ್ ಮರವು ಶುಕ್ರವಾರ ನೆಲಕ್ಕುರುಳಿದೆ.
ಶತಮಾನಗಳ ಕಾಲ ನಗರದ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡಿದ್ದ ಈ ಮರವು ನೆಲಸಮವಾಗಿರುವುದು ಪರಿಸರಪ್ರಿಯರು ಮತ್ತು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಲಾಲ್ ಬಾಗ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಈ ಮರವು, ತನ್ನ ವಿಶಾಲವಾದ ಹರವು ಮತ್ತು ಹಸಿರಿನಿಂದ ಸಂದರ್ಶಕರ ಕಣ್ಮನ ಸೆಳೆಯುತ್ತಿತ್ತು. ಶುಕ್ರವಾರ ಮಧ್ಯಾಹ್ನ ಸುಮಾರಿಗೆ, ಯಾವುದೇ ಪ್ರಬಲ ಗಾಳಿ ಅಥವಾ ಮಳೆಯಿಲ್ಲದಿದ್ದರೂ, ಮರವು ಇದ್ದಕ್ಕಿದ್ದಂತೆ ಬುಡಮೇಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

“ಸುಮಾರು 150 ವರ್ಷಗಳ ಈ ಮರ ಆಲದ ಮರ ಹಾಗೂ ಅರಳಿಮರದ ಜಾತಿಗೆ ಸೇರಿದ ಫೈಕಸ್ ಕನ್ನಿಂಗ್ ಹ್ಯಾಮಿ ಪ್ರಭೇದದ ಮರವಾಗಿದೆ. ಸಣ್ಣಪುಟ್ಟ ಪಕ್ಷಿಗಳಿಗೆ ಹಣ್ಣು ಬಿಡುವ ಉರುವಲು ಮರವಾಗಿದೆ. ಅಷ್ಟು ಬಲಿಷ್ಟವಲ್ಲದ ಮರ. ‘ವಿ’ ಆಕಾರದಲ್ಲಿ ಎರಡು ಬೃಹತ್ ರಂಬೆಗಳು ಬೆಳೆದು, ಮಧ್ಯೆ ಟೊಳ್ಳಗಿತ್ತು. ಟೊಳ್ಳಾಗಿದ್ದ ಜಾಗವು ಇತ್ತೀಚೆಗೆ ಸುರಿದ ಗಾಳಿ ಮಳೆಯ ಪರಿಣಾಮ ಶುಕ್ರವಾರ ಧರೆಗೆ ಉರುಳಿ ಬಿದ್ದಿದೆ. ಈ ಮರದ ಕಾಂಡಗಳನ್ನು ಪಡೆದು 10-15 ಪಾಟ್ ಗಳಲ್ಲಿ ಬೆಳಸಿ, ಇನ್ನೈದು- ಆರು ತಿಂಗಳಲ್ಲಿ ಇದೇ ಸ್ಥಳದಲ್ಲಿ ಈ ಮರದ ನೆನಪಿಗಾಗಿ ಇದರ ಸಸಿಯನ್ನು ನೆಡುತ್ತೇವೆ ಎಂದು ಹೇಳಿದ್ದಾರೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್.
ಫೈಕಸ್ ತಳಿಯಲ್ಲಿ 200ಕ್ಕೂ ಅಧಿಕ ಪ್ರಭೇದಗಳಿವೆ. ಅವುಗಳಲ್ಲಿ ಕನ್ನಿಂಗ್ ಹ್ಯಾಮಿ ಕೂಡ ಸೇರಿದೆ. ಈ ಮರವನ್ನು ಇಂದು ತೆರವು ಮಾಡಲಾಗುತ್ತಿದೆ. ಮರದ ವಯಸ್ಸು, ಮಣ್ಣಿನ ಸವೆತ ಅಥವಾ ಬೇರುಗಳ ದುರ್ಬಲತೆ ಮರ ಬೀಳಲು ಇತರ ಕಾರಣಗಳಾಗಿವೆ.

ಅಪರೂಪದ ಪ್ರಭೇದದ ನಷ್ಟ:

ಫೈಕಸ್ ಕನ್ನಿಂಗ್‌ಹ್ಯಾಮಿ ಪ್ರಭೇದವು ಭಾರತದಲ್ಲಿ ಅಪರೂಪದ್ದಾಗಿದ್ದು, ಲಾಲ್ ಬಾಗ್‌ನಲ್ಲಿ ಇಂತಹ ಹಲವು ಐತಿಹಾಸಿಕ ವೃಕ್ಷಗಳಿವೆ. ಈ ಮರವು ಬಿದ್ದಿರುವುದು ಪರಿಸರ ವಿಜ್ಞಾನಿಗಳು ಮತ್ತು ಸಸ್ಯಶಾಸ್ತ್ರಜ್ಞರಲ್ಲಿ ಕಳವಳಕ್ಕೆ ಕಾರಣವಾಗಿದೆ.