ಬೆಂಗಳೂರು, www.bengaluruwire.com : ರಾಜ್ಯದ ಸಂಸ್ಕೃತಿ ವಿಚಾರ ಬಂದಾಗ ಮೊದಲಿಗೆ ತಲೆಯಲ್ಲಿ ಹೊಳೆಯೋದೇ ಮೈಸೂರು. ಆ ಊರಿನ ಹೆಸರೊಂದಿಗೆ ಮೈಸೂರು ಪಾಕ್ ಎಷ್ಟು ಫೇಮಸ್ ಆಗಿದೆಯೋ, ಅಷ್ಟೇ ಪ್ರಸಿದ್ಧಿಯನ್ನು ಮೈಸೂರು ಸ್ಯಾಂಡಲ್ ಸೋಪ್ ಪಡೆದುಕೊಂಡಿದೆ. ಜಗತ್ತಿನೆಲ್ಲೆಡೆ ಪರಿಮಳ ಸೂಸಿರುವ ಮೈಸೂರ್ ಸ್ಯಾಂಡಲ್ ಜಾಗತಿಕ ಬ್ರಾಂಡ್, ಶತಮಾನ ದಾಟಿರುವ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆಯ ಹೆಮ್ಮೆಯ ಕೂಸು.
ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ, ವಿಶೇಷವಾಗಿ ಮೈಸೂರು ಸ್ಯಾಂಡಲ್ ಸೋಪ್ ಎಂಬ ಜಾಗತಿಕ ಬ್ರಾಂಡ್ ಮೂಲಕ ಕರ್ನಾಟಕಕ್ಕೆ ಹೆಮ್ಮೆಯ ಗರಿ ಮೂಡಿಸಿರುವ ತನ್ನ ಸಾರ್ಥಕ ಪಯಣದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ.
ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸಿಕೊಂಡು, ಆಧುನಿಕ ತಂತ್ರಜ್ಞಾನ ಮತ್ತು ನವೀನ ಯೋಜನೆಗಳೊಂದಿಗೆ ಮುನ್ನಡೆಯುತ್ತಿರುವ ಕೆಎಸ್‌ಡಿಎಲ್, ಕೇವಲ ಲಾಭ ಗಳಿಕೆಗೆ ಸೀಮಿತವಾಗಿಲ್ಲ. ರಾಜ್ಯದ ಆರ್ಥಿಕತೆಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಮುಂಬರುವ ವರ್ಷಗಳಲ್ಲಿ ತನ್ನ ವಹಿವಾಟನ್ನು ಸಾವಿರಾರು ಕೋಟಿ ರೂ.ಗೆ ವಿಸ್ತರಿಸುವ ಗುರಿಯನ್ನು ಕೆಎಸ್‌ಡಿಎಲ್ ಹೊಂದಿದೆ. ವಿಷನ್-2028ರ ಅಡಿಯಲ್ಲಿ ₹5,000 ಕೋಟಿ ವಹಿವಾಟಿನ ಮಹತ್ವಾಕಾಂಕ್ಷೆಯ ಕನಸನ್ನು ಕಂಡಿದೆ.
ಕೆಎಸ್‌ಡಿಎಲ್ ಪ್ರಗತಿ- ಸಾಧನೆಯ ಹೆಜ್ಜೆಗಳು:
ಕೆಎಸ್‌ಡಿಎಲ್ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ನಿರಂತರ ಪ್ರಗತಿಯನ್ನು ಸಾಧಿಸುತ್ತಿದ್ದು, ಅದರ ವಾರ್ಷಿಕ ವಹಿವಾಟು ಮತ್ತು ನಿವ್ವಳ ಲಾಭದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಆರ್ಥಿಕ ವರ್ಷ 2022-23ರಲ್ಲಿ, ₹1,375 ಕೋಟಿ ವಾರ್ಷಿಕ ವಹಿವಾಟು ನೆಡೆಸಿ, ₹182 ಕೋಟಿ ನಿವ್ವಳ ಲಾಭ ಗಳಿಸಿತು. ಇದರೊಂದಿಗೆ ಸರ್ಕಾರಕ್ಕೆ ₹54.8 ಕೋಟಿ ಡಿವಿಡೆಂಟ್ ನೀಡಿತು. ಇದಾದ ಬಳಿಕ 2023-24ರಲ್ಲಿ, ಬರೋಬ್ಬರಿ ₹1,571 ಕೋಟಿ ವಾರ್ಷಿಕ ವಹಿವಾಟು ಸಾಧಿಸಿ, ₹362 ಕೋಟಿ ನಿವ್ವಳ ಲಾಭ ಗಳಿಸಿ, ₹108.6 ಕೋಟಿ ಡಿವಿಡೆಂಟ್ ಚೆಕ್ ಅನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಎಸ್‌ಡಿಎಲ್ ಹಸ್ತಾಂತರಿಸಿತ್ತು.

ಇನ್ನು 2024-25ರಲ್ಲಿ, ಬರೋಬ್ಬರಿ ₹1,788 ಕೋಟಿ ವಾರ್ಷಿಕ ವಹಿವಾಟು ಸಾಧಿಸಿ, ₹415 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಮೂಲಕ ಸರ್ಕಾರದ ಸಾರ್ವಜನಿಕ ಉದ್ದಿಮೆಯಾಗಿ ₹120 ಕೋಟಿ ಹಣವನ್ನು ಸರ್ಕಾರಕ್ಕೆ ಹಸ್ತಾಂತರಿಸಲಿದೆ. 2025 ನೇ ಸಾಲಿನಲ್ಲಿ ಮಹತ್ತರ ಯೋಜನೆಗಳೊಂದಿಗೆ 3 ಸಾವಿರ ಕೋಟಿ ರೂ.ಆದಾಯ ಗಳಿಸುವ ಗುರಿಯೊಂದಿಗೆ ದಾಪುಗಾಲು ಹಾಕುತ್ತಿದೆ. ಕೆಎಸ್ ಡಿಎಲ್ ಪ್ರತಿದಿನ 1.8 ದಶಲಕ್ಷ ಸಾಬೂನುಗಳನ್ನು ಉತ್ಪಾದಿಸುತ್ತದೆ. ಸಂಸ್ಥೆಯ ಒಟ್ಟು ಉತ್ಪಾದನೆಯಲ್ಲಿ ಸಾಬೂನುಗಳ ಪ್ರಮಾಣ ಶೇ.70ರಷ್ಟಿದೆ ಎಂದು ಮೂಲಗಳು ತಿಳಿಸಿವೆ.
2024-25ರಲ್ಲಿ ಕೆಎಸ್‌ಡಿಎಲ್‌ನ ಎಲ್ಲಾ ಪ್ರಮಾಣದ ವಾರ್ಷಿಕ ಉತ್ಪಾದನೆಯು 43,144.29 ಟನ್‌ಗಳಿಗೆ ದಾಖಲಾಗಿದ್ದು, 2023-24ರಲ್ಲಿ 37,916 ಟನ್‌ಗಳಷ್ಟಿತ್ತು, ಇದು ಶೇ. 13.78 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಇದು ಸಂಸ್ಥೆಯ ಪರಿಣಾಮಕಾರಿ ನಿರ್ವಹಣೆಯಿಂದ ಸದೃಢ ಆರ್ಥಿಕ ಸ್ಥಿತಿ ತಲುಪಿರುವುದಕ್ಕೆ ಸಾಕ್ಷಿಯಾಗಿದೆ.
ತ್ರಿಮೂರ್ತಿಗಳ ಸಮರ್ಪಕ ಮುಂದಾಳತ್ವ :
ಎಂ.ಬಿ.ಪಾಟೀಲ್ 2023ರಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಾರ್ವಜನಿಕ ಉದ್ದಿಮೆಯಲ್ಲಿನ ಸಾಮರ್ಥ್ಯ, ದಕ್ಷತೆ ತರಲು ಕ್ರಮ ಕೈಗೊಂಡರು. ಇದು ಸಾಲದೆಂಬಂತೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಕೆಎಸ್‌ಡಿಎಲ್ ಅಧ್ಯಕ್ಷರಾಗಿ ಸಾರಥ್ಯವಹಿಸಿಕೊಂಡ ಮೇಲೆ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸಂಸ್ಥೆಯ ಬಲವನ್ನು ಹೆಚ್ಚಿಸಿದರು.

ಇದಕ್ಕೆ ಸರಿಯಾಗಿ ಮೈಸೂರ್ ಸ್ಯಾಂಡಲ್ ಸೋಪಿನ ಶತಮಾನದ ಇತಿಹಾಸವಿರುವ ಸಂಸ್ಥೆಯ ವಹಿವಾಟು ಹಾಗೂ ಕಾರ್ಯಾಚರಣೆಯನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ಡಾ.ಪಿ.ಕೆ.ಎಂ.ಪ್ರಶಾಂತ್ ಚುರುಕಾಗಿ, ಸುಗಮವಾಗಿ ಮುಂದಕ್ಕೆ ಕೊಂಡೊಯ್ದರು. ಈ ಮೂವರ ಸಂಕಲ್ಪದ ಫಲವಾಗಿ ಕೆಎಸ್‌ಡಿಎಲ್ ವಹಿವಾಟು ಮತ್ತು ಲಾಭಾಂಶದಲ್ಲಿಯೂ ಸಹಜವಾಗಿ ಏರಿಕೆಯಾಗಿದೆ.

ಕೆಎಸ್‌ಡಿಎಲ್ ವಿಷನ್-2028 ಎಂದರೇನು? :
ಕೆಎಸ್‌ಡಿಎಲ್ ನ ಮಹತ್ವಾಕಾಂಕ್ಷೆಯ ವಿಷನ್-2028 ಯೋಜನೆಯು ಸಂಸ್ಥೆಯ ಭವಿಷ್ಯದ ದಿಕ್ಕನ್ನು ಸ್ಪಷ್ಟಪಡಿಸುತ್ತಿದೆ. 2028ನೇ ಇಸವಿ ವೇಳೆಗೆ ₹5,000 ಕೋಟಿ ವಾರ್ಷಿಕ ವಹಿವಾಟು ತಲುಪುವ ಗುರಿಯೊಂದಿಗೆ, ಈ ಸಾರ್ವಜನಿಕ ಉದ್ದೆಮಯು ತನ್ನ ಸಾಮರ್ಥ್ಯವನ್ನು ವಿಸ್ತರಿಸುವ ಉದ್ದೇಶ ಹೊಂದಿದೆ. ಈ ಬೃಹತ್ ಗುರಿಯನ್ನು ಸಾಧಿಸಲು, ಸಂಸ್ಥೆಯು ಬಹು ಆಯಾಮದ ಕಾರ್ಯತಂತ್ರಗಳನ್ನು ರೂಪಿಸಿದೆ.
ಕೆಎಸ್‌ಡಿಎಲ್ ಉತ್ಪನ್ನಗಳ ವೈವಿಧ್ಯತೆ :

ಪ್ರಸ್ತುತ, ಕೆಎಸ್‌ಡಿಎಲ್ ಸುಮಾರು 58 ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅವುಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಅತ್ಯುತ್ತಮ ಗುಣಮಟ್ಟದ 20 ಉತ್ಪನ್ನಗಳಿವೆ. ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಲ್ಯಾವೆಂಡರ್ ಸೋಪ್, ಮೈಸೂರ್ ಸ್ಯಾಂಡಲ್ ಗೋಲ್ಡ್, ಮೈಸೂರು ಸ್ಯಾಂಡಲ್ ಮಿಲೇನಿಯಮ್ ಸೋಪ್‌ನಂತಹ ಜನಪ್ರಿಯ ಸಾಬೂನುಗಳಲ್ಲದೆ, ಡಿಟರ್ಜೆಂಟ್‌ಗಳು, ಶಾಂಪೂ, ಫೇಸ್ ವಾಶ್, ಅಗರ್‌ಬತ್ತಿ, ಪೂಜಾ ಸಾಮಗ್ರಿಗಳು ಮತ್ತು ಇತರ ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಸಂಸ್ಥೆಯು ಉತ್ಪಾದಿಸುತ್ತದೆ.
ವಿಷನ್-2028ರ ಅಡಿಯಲ್ಲಿ, ಕೆಎಸ್‌ಡಿಎಲ್ ಹೊಸ ಉತ್ಪನ್ನ ಶ್ರೇಣಿಗಳನ್ನು ಪರಿಚಯಿಸಲು, ನವೀನ ಫಾರ್ಮುಲೇಶನ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ಸಮರ್ಪಕ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದರ ಭಾಗವಾಗಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ನ ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಮಾಡಿದೆ.
ರಫ್ತು ಹೆಚ್ಚಳಕ್ಕೆ ಮಾಸ್ಟರ್ ಪ್ಲಾನ್ :
ಕೆಎಸ್‌ಡಿಎಲ್ ಕೇವಲ ದೇಶೀಯ ಮಾರುಕಟ್ಟೆಗೆ ಸೀಮಿತವಾಗದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ. ಗುಣಮಟ್ಟದ ಉತ್ಪನ್ನಗಳು ಮತ್ತು ಮೈಸೂರು ಸ್ಯಾಂಡಲ್ ಸೋಪ್‌ನ ವಿಶಿಷ್ಟ ಪರಂಪರೆ, ವಿಶ್ವ ಮಾರುಕಟ್ಟೆಯಲ್ಲಿ ಕೆಎಸ್‌ಡಿಎಲ್ ಗೆ ಅಪಾರ ಅವಕಾಶಗಳನ್ನು ತೆರೆದಿವೆ. ಪ್ರಸ್ತುತ 25 ರಾಷ್ಟ್ರಗಳಲ್ಲಿ ಸಂಸ್ಥೆಗೆ ಮಾರುಕಟ್ಟೆಯಿದ್ದು, 2026ರ ಇಸವಿಯ ವೇಳೆಗೆ 80 ರಾಷ್ಟ್ರಗಳಿಗೆ ವ್ಯಾಪಿಸುವ ಗುರಿ ಹೊಂದಿದೆ. ಇದಕ್ಕಾಗಿ ಹೊಸ ದೇಶಗಳಿಗೆ ಉತ್ಪನ್ನಗಳನ್ನು ಪರಿಚಯಿಸುವುದು, ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದು ಮತ್ತು ಜಾಗತಿಕ ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವುದು ಕೆಎಸ್‌ಡಿಎಲ್ ನ ಯೋಜನೆಗಳಲ್ಲಿ ಸೇರಿವೆ. ಇದರಿಂದ ಸಂಸ್ಥೆಯ ವಹಿವಾಟು ಹೆಚ್ಚಳದ ಜೊತೆಗೆ, ರಾಜ್ಯದ ರಫ್ತು ಆದಾಯಕ್ಕೂ ಕೊಡುಗೆ ನೀಡಲಿದೆ.
ತಾಂತ್ರಿಕ ಉನ್ನತೀಕರಣ ಮತ್ತು ಸಂಶೋಧನೆ:
ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಕೆಎಸ್‌ಡಿಎಲ್ ನ ಪ್ರಗತಿಗೆ ಅತ್ಯಗತ್ಯವಾಗಿದೆ. ಉತ್ಪಾದನಾ ಪ್ರಕ್ರಿಯೆಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು, ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಮತ್ತು ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಸಂಸ್ಥೆಯು ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ.
ಮಾರುಕಟ್ಟೆ ವಿಸ್ತರಣೆ ಮತ್ತು ಬ್ರ್ಯಾಂಡಿಂಗ್:
ದೇಶಾದ್ಯಂತ ತನ್ನ ವಿತರಣಾ ಜಾಲವನ್ನು ಬಲಪಡಿಸುವುದು, ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವುದು ಮತ್ತು ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಕೆಎಸ್‌ಡಿಎಲ್ ನ ಯೋಜನೆಯ ಭಾಗವಾಗಿದೆ. ಮೈಸೂರು ಸ್ಯಾಂಡಲ್ ಸೋಪ್‌ನ ಪರಂಪರೆಯನ್ನು ಎತ್ತಿಹಿಡಿಯುವುದರ ಜೊತೆಗೆ, ಕೆಎಸ್‌ಡಿಎಲ್ ತನ್ನ ಇತರೆ ಉತ್ಪನ್ನಗಳಿಗೂ ಪ್ರಚಾರ ನೀಡಲಿದೆ.
‘ಗ್ರೋ ಮೋರ್ ಸ್ಯಾಂಡಲ್’ – ರೈತರಿಗೆ ಶ್ರೀಗಂಧ ಬೆಳೆಸಲು ಉತ್ತೇಜನ :

ಕೆಎಸ್‌ಡಿಎಲ್ ಕೇವಲ ವ್ಯಾಪಾರ ಉದ್ದೇಶಗಳನ್ನು ಮೀರಿ, ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯವಾಗಿ ಶ್ರೀಗಂಧದ ಕೃಷಿಯನ್ನು ಪ್ರೋತ್ಸಾಹಿಸುವುದು, ರೈತರಿಗೆ ಬೆಂಬಲ ನೀಡುವುದು ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿದೆ. ರೈತರಿಗೆ ಗಂಧದ ಮರಗಳನ್ನು ಬೆಳೆಯಲು ಉತ್ತೇಜನ ನೀಡಲೆಂದೇ ‘ಗ್ರೋ ಮೋರ್ ಸ್ಯಾಂಡಲ್’ ಕಾರ್ಯಕ್ರಮ ರೂಪಿಸಿದೆ.
ಪ್ರತಿವರ್ಷ 1000 ಎಕರೆ ಭೂಮಿಯಲ್ಲಿ ಶ್ರೀಗಂಧದ ನೆಡುತೋಪು ನಿರ್ಮಾಣ ಮಾಡಿ, 10 ವರ್ಷಗಳ ಅವಧಿಯಲ್ಲಿ 10,000 ಎಕರೆ ವಿಸ್ತೀರ್ಣದಲ್ಲಿ ನೆಡುತೋಪು ಬೆಳೆಸುವ ಗುರಿ ಇಟ್ಟುಕೊಂಡಿದೆ. ಈ ಉದ್ದೇಶಕ್ಕಾಗಿ ಕೆಎಸ್‌ಡಿಎಲ್ 713 ರೈತರ ಜೊತೆ ಒಪ್ಪಂದ ಮಾಡಿಕೊಂಡಿದೆ. ಸಂಸ್ಥೆಯು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಒದಗಿಸುತ್ತಿರುವ ಉದ್ಯೋಗಾವಕಾಶಗಳು, ರಾಜ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ.
ಶತಮಾನದ ಇತಿಹಾಸ ಹೊಂದಿರುವ ಕೆಎಸ್‌ಡಿಎಲ್, ತನ್ನ ಉತ್ಪನ್ನಗಳ ಗುಣಮಟ್ಟ, ನಾವೀನ್ಯತೆ ಮತ್ತು ಗ್ರಾಹಕ ಕೇಂದ್ರಿತ ದೃಷ್ಟಿಕೋನದಿಂದಾಗಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ವಿಷನ್-2028ರ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ, ಕೆಎಸ್‌ಡಿಎಲ್ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ದೊಡ್ಡ ಯಶಸ್ಸನ್ನು ಸಾಧಿಸಲಿದೆ ಎಂಬುದರಲ್ಲಿ ಸಂಶಯವಿಲ್ಲ. ಇದು ಕೇವಲ ಒಂದು ಕಂಪನಿಯ ಪ್ರಗತಿಯ ಕಥೆಯಲ್ಲ, ಬದಲಿಗೆ ಕರ್ನಾಟಕದ ಕೈಗಾರಿಕಾ ಶಕ್ತಿ ಮತ್ತು ಜಾಗತಿಕ ಗುಣಮಟ್ಟದ ಸಂಕೇತವಾಗಿದೆ. ಕೆಎಸ್‌ಡಿಎಲ್ ನ ಈ ಪ್ರಗತಿಯ ಪಥವು ನಾಡಿಗೆ ಹೆಮ್ಮೆಯ ಸಂಕೇತವಾಗಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.