ಬೆಂಗಳೂರು, ಮೇ.24 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಧಾನ ಅಭಿಯಂತರರಾಗಿದ್ದ ಬಿ.ಎಸ್. ಪ್ರಹ್ಲಾದ್ ಅವರನ್ನು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ (B-SMILE) ಯ ನಿರ್ದೇಶಕರ (ತಾಂತ್ರಿಕ) ಹುದ್ದೆಗೆ ಪೂರ್ಣಾವಧಿಗೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ನಿರ್ಧಾರದಿಂದ ತೆರವಾಗಿರುವ ಬಿಬಿಎಂಪಿಯ ಪ್ರಮುಖ ಹುದ್ದೆಗಳಿಗೆ ತಾತ್ಕಾಲಿಕ ಪ್ರಭಾರವನ್ನು ವಹಿಸಲು ಸರ್ಕಾರ ಸೂಚಿಸಿದೆ. ರಾಜ್ಯ ಸರ್ಕಾರದ ನಡವಳಿಗಳ ಪ್ರಕಾರ, ಬಿ.ಎಸ್. ಪ್ರಹ್ಲಾದ್ ಅವರ ನೇಮಕಾತಿಯು ತತ್‌ಕ್ಷಣದಿಂದ ಜಾರಿಗೆ ಬಂದಿದೆ. ಬಿ-ಸ್ಮೈಲ್ ನಲ್ಲಿನ ನಿರ್ದೇಶಕರ ಹುದ್ದೆಯು ಬಿಬಿಎಂಪಿಯಲ್ಲಿನ ಪ್ರಧಾನ ಅಭಿಯಂತರರು, ಹುದ್ದೆಗೆ ತತ್ಸಮಾನವಾಗಿದೆ ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಬಿ-ಸ್ಮೈಲ್ ಹುದ್ದೆ ಸೃಷ್ಟಿಸಲು ಕಾರಣ? :
2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, ಬೆಂಗಳೂರು ನಗರದ ಮೂಲಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಮತ್ತು ವಾರ್ಷಿಕ 3,000 ಕೋಟಿ ರೂ. ಅನುದಾನವನ್ನು 7,000 ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಬೃಹತ್ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ, ಸರ್ಕಾರವು ಹೊಸದಾಗಿ ವಿಶೇಷ ಉದ್ದೇಶಿತ ಸಂಸ್ಥೆ (Special Purpose Vehicle) ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ (B-SMILE) ಯನ್ನು ಸ್ಥಾಪಿಸಿತ್ತು.

ಬಿ-ಸ್ಮೈಲ್ ಮೂಲಕ ಸರಂಗ ಮಾರ್ಗ, ಎತ್ತರಿಸಿದ ಮೇಲ್ಸೇತುವೆಗಳು, ಸೈ-ಡೆಕ್, ವೈಟ್ ಟಾಪಿಂಗ್ ಮತ್ತು ಹೊಸ ಬಫರ್ ರಸ್ತೆಗಳ ನಿರ್ಮಾಣ ಸೇರಿದಂತೆ ದೀರ್ಘಾವಧಿಯ ಮೂಲಭೂತ ಸೌಕರ್ಯ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಸಂಸ್ಥೆಯನ್ನು ಶೀಘ್ರವಾಗಿ ಕಾರ್ಯಾಚರಣೆಗೆ ತರಲು ಅಗತ್ಯ ಮಾನವ ಸಂಪನ್ಮೂಲವನ್ನು ಒದಗಿಸುವ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಬಿಬಿಎಂಪಿ ವಿಂಗಡಣೆ ಮತ್ತು ಹುದ್ದೆಗಳ ವಿಲೀನ:
ಪ್ರಸ್ತುತ ಗ್ರೇಟರ್ ಬೆಂಗಳೂರು ಕಾಯ್ದೆ ಅಸ್ತಿತ್ವಕ್ಕೆ ಬಂದಿರುವುದರಿಂದ, ಮುಂದಿನ ನಾಲ್ಕು ತಿಂಗಳೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಂಗಡಿಸಿ ಹೊಸ ನಗರ ಪಾಲಿಕೆಗಳನ್ನು (City Corporations) ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024ರಡಿ ಸೃಜಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಬಿಎಂಪಿಯ ಪ್ರಧಾನ ಅಭಿಯಂತರರ ಹುದ್ದೆಯನ್ನು ಬಿ-ಸ್ಮೈಲ್‌ನ ನಿರ್ದೇಶಕರು (ತಾಂತ್ರಿಕ) ಹುದ್ದೆಗೆ ಪೂರ್ಣಕಾಲಿಕವಾಗಿ ವಿಲೀನಗೊಳಿಸಲು ಸರ್ಕಾರ ತೀರ್ಮಾನಿಸಿ ಆದೇಶಿಸಿದೆ.
ಮುಖ್ಯ ಅಭಿಯಂತರರ ಹುದ್ದೆಗಳಿಗೆ ಪ್ರಭಾರ:
ಬಿ.ಎಸ್. ಪ್ರಹ್ಲಾದ್ ಅವರ ನೇಮಕಾತಿಯಿಂದಾಗಿ ರಸ್ತೆ ಮೂಲಭೂತ ಸೌಕರ್ಯ ಮತ್ತು ಬೃಹತ್ ನೀರುಗಾಲುವೆ, ಮುಖ್ಯ ಅಭಿಯಂತರರ ಬಿಬಿಎಂಪಿಯಲ್ಲಿನ ಹುದ್ದೆಗಳು ತೆರವಾಗಿವೆ. ಈ ಹುದ್ದೆಗಳಿಗೆ ಸೂಕ್ತ ಚೀಫ್ ಎಂಜಿನಿಯರ್ ಗಳನ್ನು ಸರ್ಕಾರ ನೇಮಿಸುವವರೆಗೆ, ಈ ಹುದ್ದೆಗಳ ಪ್ರಭಾರವನ್ನು ತಾತ್ಕಾಲಿಕವಾಗಿ ಬಿಬಿಎಂಪಿಯ ಸೂಕ್ತ ಮುಖ್ಯ ಅಭಿಯಂತರರಿಗೆ ವಹಿಸಲು ಸರ್ಕಾರ ಆದೇಶಿಸಿದೆ.
ಸರ್ಕಾರದ ಆದೇಶಿಸಿದಂತೆ ಜಿಬಿಎ ಅಸ್ತಿತ್ಥಕ್ಕೆ ಬಂದ ನಂತರ ಪಾಲಿಕೆ ಆಡಳಿತದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು, ದಶಕಗಳ ಕಾಲ ಪಾಲಿಕೆಯಲ್ಲಿದ್ದ ಪ್ರಧಾನ ಅಭಿಯಂತರರ ಹುದ್ದೆಗೆ ಇನ್ನು ನೇಪಥ್ಯಕ್ಕೆ ಸೇರುವಂತಾಗಿದೆ. ಈ ಹುದ್ದೆಗೆ ಏರುವ ಮುನ್ನ ಹಾಗೂ ನಂತರವೂ ಪ್ರಹ್ಲಾದ್ ಅವರು ತಮ್ಮ ಬಳಿಯಲ್ಲಿಯೇ ರಸ್ತೆ ಮೂಲಭೂತ ಸೌಕರ್ಯ ಮತ್ತು ಬೃಹತ್ ನೀರುಗಾಲುವೆ ಮುಖ್ಯ ಅಭಿಯಂತರರ ಹುದ್ದೆಯನ್ನು ಬಿಗಿ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಸರ್ಕಾರ ಬಿ-ಸ್ಮೈಲ್ ನಿರ್ದೇಶಕರ ಹುದ್ದೆಯಿಂದ ಈ ಎರಡು ಹುದ್ದೆಗಳು ಅವರಿಂದ ಕೈತಪ್ಪಿದಂತಾಗಿದೆ.