ಬೆಂಗಳೂರು, ಮೇ.21 www.bengaluruwire.com : ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳ ಅಗತ್ಯದ ಕುರಿತು ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಉಚಿತವಾಗಿ ಔಷಧಿಗಳನ್ನು ನೀಡುತ್ತಿರುವಾಗ, ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸುವ ಜನೌಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಏಕೆ ಬೇಕು ಎಂದು ಸಚಿವರು ಪ್ರಶ್ನಿಸಿದ್ದಾರೆ.
“ಜನ ಔಷಧಿ ಕೇಂದ್ರಗಳಲ್ಲಿ ಔಷಧಿಗಳು ರಿಯಾಯಿತಿ ದರದಲ್ಲಿ ಸಿಗುತ್ತದೆ ನಿಜ. ಆದರೆ, ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳಲ್ಲಿ ಉಚಿತವಾಗಿಯೇ ಔಷಧಿಗಳು ದೊರೆಯುತ್ತವೆ. ಉಚಿತವಾಗಿ ಸಿಗುವಾಗ ರಿಯಾಯಿತಿ ದರದ ಜನ ಔಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಏಕೆ ಬೇಕು?” ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಾತ್ರ ಜನೌಷಧಿ ಕೇಂದ್ರಗಳಿಗೆ ನಿರ್ಬಂಧ ಹೇರಲಾಗಿದ್ದು, ಬೇರೆ ಸ್ಥಳಗಳಲ್ಲಿರುವ ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕರು ಔಷಧಿಗಳನ್ನು ಪಡೆಯಬಹುದಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದವರಿಗಾಗಿ ಸರ್ಕಾರವು ಸಾವಿರಾರು ಕೋಟಿ ಖರ್ಚು ಮಾಡಿ ಔಷಧಿಗಳನ್ನು ಖರೀದಿಸಿ ಉಚಿತವಾಗಿ ನೀಡುತ್ತಿರುವಾಗ, ಅದರ ಸದ್ಬಳಕೆಯಾಗಬೇಕು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

“ಅಷ್ಟಕ್ಕೂ ಜನೌಷಧಿ ಕೇಂದ್ರಗಳಿಗೆ ಹೋಲಿಸಿದರೆ ನಮ್ಮ ಸರ್ಕಾರಿ ಔಷಧಿ ಕೇಂದ್ರಗಳಲ್ಲಿಯೇ ಹೆಚ್ಚಿನ ಔಷಧಗಳ ಲಭ್ಯತೆ ಇದೆ. ಜನೌಷಧಿ ಕೇಂದ್ರಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದರ ಬಗ್ಗೆ ಮಾಧ್ಯಮಗಳ ವರದಿಗಳು ನಿಮ್ಮ ಕಣ್ಮುಂದೆಯೇ ಇದೆ” ಎಂದು ದಿನೇಶ್ ಗುಂಡೂರಾವ್, ಜನೌಷಧಿ ಕೇಂದ್ರಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಯು ರಾಜ್ಯದಲ್ಲಿ ಉಚಿತ ಆರೋಗ್ಯ ಸೇವೆಗಳು ಮತ್ತು ಔಷಧಿಗಳ ಲಭ್ಯತೆಯ ಕುರಿತು ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ. ಸರ್ಕಾರದ ಆದ್ಯತೆ ಉಚಿತ ಔಷಧಗಳ ಸದ್ಬಳಕೆ ಮತ್ತು ಅವುಗಳ ಲಭ್ಯತೆಯನ್ನು ಖಚಿತಪಡಿಸುವುದಾಗಿ ಸಚಿವರು ತಿಳಿಸಿದ್ದಾರೆ.