ಬೆಂಗಳೂರು, ಮೇ.19 www.bengaluruwire.com : ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಆರ್. ನಾಯಕ್ (80) ಅವರು ಭಾನುವಾರ ನಿಧನರಾದರು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಶಾಲಿನಿ ಎಸ್.ನಾಯಕ್, ಪುತ್ರ ಡಾ.ಎನ್.ಎಸ್.ರಾಹುಲ್ ಹಾಗೂ ಪುತ್ರಿ ನಿಶಾ ಗಾವ್ಕರ್ ಅವರನ್ನು ಅಗಲಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರಾದ ಎಸ್.ಆರ್. ನಾಯಕ್ ಅವರು, 1945ರ ಜನವರಿ 1ರಂದು ಜನಿಸಿದರು. 1974ರಲ್ಲಿ ವಕೀಲರಾಗಿ ರಾಜ್ಯ ವಕೀಲರ ಪರಿಷತ್ ನಲ್ಲಿ ಸನ್ನದು ನೋಂದಣಿ ಮಾಡಿಸಿ ವಕೀಲಿ ವೃತ್ತಿ ಆರಂಭಿಸಿದ ಅವರು, ಕಾರ್ಮಿಕ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಪರಿಣತಿ ಪಡೆದಿದ್ದರು.
1994ರಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಅವರು, ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ, ನಂತರ ಛತ್ತೀಸ್‌ಗಢ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದಲ್ಲದೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಅವರು ಸಮಾಜದ ದುರ್ಬಲ ವರ್ಗಗಳ ಪರವಾಗಿ ಧ್ವನಿ ಎತ್ತಿದ್ದರು. ಕಾನೂನು ಆಯೋಗದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು.

ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನ್ಯಾಯಮೂರ್ತಿ ನಾಯಕ್ ಅವರು, ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಸರಳತೆ, ಸಜ್ಜನಿಕೆ ಹಾಗೂ ಕಾನೂನು ಜ್ಞಾನಕ್ಕೆ ಅವರು ಹೆಸರುವಾಸಿಯಾಗಿದ್ದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ

ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕೋರ್ಟ್‌ನ ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅವರ ಅಂತ್ಯಕ್ರಿಯೆಯು ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಲಿದೆ. ಆರ್ ಎಂವಿ ಎರಡನೇ ಹಂತದ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆಯ ವರೆಗೆ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. (Photo Credit : Deccan Chronicle)