ಬೆಂಗಳೂರು: ಮೇ.19 www.bengaluruwire.com : ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದಾಗಿದೆ.
ಆದರೆ, ಸಿಎಂ ಮತ್ತು ಡಿಸಿಎಂ, ಸಚಿವ ಕೆ.ಜೆ.ಜಾರ್ಜ್, ಶಾಸಕ ಎನ್.ಎ.ಹ್ಯಾರೀಸ್ ಮತ್ತು ವಿಧಾನ ಪರಿಷತ್ ಸದಸ್ಯರು ಬಿಬಿಎಂಪಿ ಕೇಂದ್ರ ಕಚೇರಿಯ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಮತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ನಗರದಲ್ಲಿ ಮಳೆ ಅನಾಹುತಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲು ಸೂಕ್ತ ಸಲಹೆ-ಸೂಚನೆ ನೀಡಿದರು.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಂಜೆ ನಗರಪ್ರದಕ್ಷಿಣೆ ಮಾಡಿದರೆ ವಾಹನದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನಾಡಿದ್ದು ಇಡೀ ದಿನ ನಗರ ಪ್ರದಕ್ಷಿಣೆ ಭೇಟಿ ಮಾಡುತ್ತೇವೆ. ಮಹದೇವಪುರದಲ್ಲಿ ಮಳೆಯ ಸೃಷ್ಟಿಸಿದ ಹಾನಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಒದಗಿಸುವುದಾಗಿ ಸಿಎಂ ಹೇಳಿದ್ದಾರೆ.





ಇಂದು ಮಧ್ಯಾಹ್ನ 2.30ರಿಂದಲೇ ನಗರದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಳೆ ಸುರಿದು ವಾಹನ ಸಂಚಾರಕ್ಕೆ ತೊಡಕಾಯಿತು. ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗಿನವರೆಗೆ 104 ಮಿಮೀ ಮಳೆಯಾಗಿದೆ. ನಗರದ ವಿವಿಧ ಸ್ಥಳಗಳಲ್ಲಿ ಐದು ಜಾನುವಾರು ಸಾವನ್ನಪ್ಪಿದರೆ, 23 ಮರ ಬಿದ್ದಿದೆ, ಹೀಗಾಗಿ ಕೆಲವು ಕಡೆ ವಾಹನಗಳು ಜಖಂ ಆಗಿವೆ. 43 ರಂಬೆಕೊಂಬೆ ಮುರಿದುಬಿದ್ದಿದೆ ಎಂದು ಪಾಲಿಕೆ ತಿಳಿಸಿದೆ.

ಬೆಳಗ್ಗೆಯಿಂದಲೇ ಬಿಬಿಎಂಪಿ ಆಡಳಿತಗಾರರಾದ ತುಷಾರ್ ಗಿರಿನಾಥ್ ಮತ್ತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾಯಿ ಲೇಔಟ್ ಮತ್ತು ಬೆಳ್ಳಂದೂರು ಕೆರೆ ಪ್ರದೇಶಗಳಿಗೆ ವಿಶೇಷ ಗಮನ ಹರಿಸಲಾಯಿತು. ಸಾಯಿ ಲೇಔಟ್ ಪ್ರದೇಶದಲ್ಲಿ ಟ್ರ್ಯಾಕ್ಟರ್ ಮೂಲಕ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದ ಆಡಳಿತಗಾರರು, ಈ ಪ್ರದೇಶವು ತಗ್ಗು ಪ್ರದೇಶದಲ್ಲಿರುವುದರಿಂದ ಜಲಾವೃತವಾಗಿದೆ ಎಂದು ತಿಳಿಸಿದರು.
ಗೆದ್ದಲಹಳ್ಳಿ ಬಳಿ ರೈಲ್ವೆ ವೆಂಟ್ ಅಗಲೀಕರಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಜಲಾವೃತ ಪ್ರದೇಶದ ನಿವಾಸಿಗಳಿಗೆ ಊಟ, ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬೆಳ್ಳಂದೂರು ಕೆರೆ ಇನ್ಲೆಟ್ ಜಂಕ್ಷನ್ ಬಳಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೆ-100 ಮತ್ತು ಕೆ-200 ಬೃಹತ್ ನೀರುಗಾಲುವೆಗಳ ಅಗಲೀಕರಣದ ಕೊರತೆಯಿಂದಾಗಿ ಮಡಿವಾಳ, ಕೋರಮಂಗಲ, ಈಜೀಪುರ ಪ್ರದೇಶಗಳು ಜಲಾವೃತವಾಗಿವೆ ಎಂದು ತಿಳಿಸಿದರು.
ಮಳೆ ನೀರಿನ ಹರಿವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆಸಿಬಿ ಮೂಲಕ ಬಂಡ್ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.